ಕೆರೆಯಲ್ಲಿ ಬಿದ್ದ ಗೆಳೆಯನನ್ನು ಪ್ರಾಣವನ್ನು ಲೆಕ್ಕಿಸದೆ ರಕ್ಷಿಸಿದ 5ನೇ ತರಗತಿ ಬಾಲಕ

ಆಲಪ್ಪುಳ: ಟ್ಯೂಷನ್‌ಗೆ ಹೋಗುವಾಗ ಕಾಲು ಜಾರಿ ಕೆರೆಯಲ್ಲಿ ಬಿದ್ದ ಒಂದನೇ ತರಗತಿಯ ವಿದ್ಯಾರ್ಥಿಯನ್ನು ಐದನೇ ತರಗತಿಯಲ್ಲಿ ಓದುತ್ತಿರುವ ಆತನ ಸ್ನೇಹಿತ ಜೀವದ ಹಂಗು ತೊರೆದು ಸಾಹಸದಿಂದ ರಕ್ಷಿಸಿದ ಘಟನೆ ಕೇರಳದಲ್ಲಿ ನಡೆದಿದೆ. ಕಾವಲಂ ಸರ್ಕಾರಿ ಎಲ್ ಪಿ ಶಾಲೆಯ ವಿದ್ಯಾರ್ಥಿ ಅಭಿದೇವ್ ಕೆರೆಗೆ ಬಿದ್ದವನು.

ಕಾವಲಂ ಪಂಚಾಯತ್ ಏಳನೇ ವಾರ್ಡ್ ನ ಬಾಬು ನಿಲಯದ ವಿದ್ಯಾರ್ಥಿ ಅನಿಲ್ ಅನುಗ್ರಹ್ ಜೀವದ ಹಂಗು ತೊರೆದು ಕೆರೆಗೆ ಹಾರಿ ಬಾಲಕನನ್ನು ರಕ್ಷಿಸಿದ್ದಾನೆ. ಗುರುವಾರ ಸಂಜೆ 5.30ಕ್ಕೆ ಈ ಘಟನೆ ನಡೆದಿದ್ದು, ಶಾಲೆಯಿಂದ ಮನೆಗೆ ಬಂದ ನಂತರ ಅನುಗ್ರಹ್, ಅಭಿದೇವ್ ಮತ್ತು ಅವರ ಸ್ನೇಹಿತರು ಪೆರುಮಾಳ್ ಜೆಟ್ಟಿಯ ಬಳಿಯಿರುವ ಮನೆಗೆ ಟ್ಯೂಷನ್‌ಗೆ ಹೋಗುತ್ತಿದ್ದರು. ಈ ವೇಳೆ ಸ್ನೇಹಿತರ ಜೊತೆ ಮಾತನಾಡುತ್ತಾ ಹೋಗುವಾಗ ಅಭಿದೇವ್ ಕಾಲು ಜಾರಿ ಬಳಿಯಲ್ಲಿದ್ದ ಕೆರೆಗೆ ಬಿದ್ದಿದ್ದಾನೆ. ಜೊತೆಯಲ್ಲಿದ್ದ ಇತರ ವಿದ್ಯಾರ್ಥಿಗಳು ಗಾಬರಿಯಿಂದ ಸುಮ್ಮನೆ ನಿಂತಾಗ, ಅನುಗ್ರಹ್ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಕೆರೆಗೆ ಹಾರಿ ಸ್ನೇಹಿತನನ್ನು ಮೇಲಕ್ಕೆತ್ತಿ ಹತ್ತಿರದ ಕಲ್ಲುಬಂಡೆಯ ಬಳಿ ತಂದಿದ್ದಾನೆ. ಘಟನೆಯನ್ನು ಕಂಡು ಇನ್ನೊಂದು ದಡದಲ್ಲಿದ್ದ ಕೆಲವು ಸ್ಥಳೀಯರು ಈಜಿ ಬಂದು ಅಭಿದೇವ್‌ನನ್ನು ದಡಕ್ಕೆ ಕರೆತಂದಿದ್ದಾರೆ..

ಕಾವಲಂ ಸರ್ಕಾರಿ ಯು ಪಿ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿಯಾಗಿರುವ ಅನುಗ್ರಹನ ಸಮಯಪ್ರಜ್ಞೆಯಿಂದಾಗಿ ಸ್ನೇಹಿತನ ಪ್ರಾಣ ಉಳಿದಿದೆ. ಅನುಗ್ರಹ್‌ನ ಧೈರ್ಯವನ್ನು ಸ್ಥಳೀಯರು ಮತ್ತು ಶಾಲಾ ಅಧಿಕಾರಿಗಳು ಶ್ಲಾಘಿಸಿದ್ದಾರೆ. ಸರ್ಕಾರಿ ಯುಪಿ ಶಾಲೆಯ ಶಿಕ್ಷಕರು ಮತ್ತು ಪಿಟಿಎ ಸಹ ಬಾಲಕನನ್ನು ಅಭಿನಂದಿಸಿದ್ದಾರೆ.
