15 ವರ್ಷದ ಬಾಲ ನಟ ಉಮರ್ ಶಾ ಇನ್ನಿಲ್ಲ; ಹೃದಯ ಸ್ತಂಭನದಿಂದ ಸಾವು

ಕರಾಚಿ: 15ರ ಸಣ್ಣ ವಯಸ್ಸಿನಲ್ಲೇ ಖ್ಯಾತ ಬಾಲ ನಟ ಇಹಲೋಕ ತ್ಯಜಿಸಿದ್ದು, ಮನರಂಜನಾ ಲೋಕ ಆಘಾತಕ್ಕೆ ಒಳಗಾಗಿದೆ.

ಪಾಕಿಸ್ತಾನದ ಎಂಟರ್ಟೈನ್ಮೆಂಟ್ ಇಂಡಸ್ಟ್ರಿಯಲ್ಲಿ ಸಣ್ಣ ವಯಸ್ಸಿನಿಂದಲೇ ಅಪಾರ ಜನಪ್ರಿಯತೆ ಹೊಂದಿದ್ದ ಬಾಲನಟ ಉಮರ್ ಶಾ (Child star Umer Shah) 15ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ.
ಸೋಮವಾರ (ಸೆ.15) ಬೆಳಗಿನ ಜಾವ ಪಾಕಿಸ್ತಾನದ ಡೇರಾ ಇಸ್ಮಾಯಿಲ್ ಖಾನ್‌ನಲ್ಲಿ ಹೃದಯ ಸ್ತಂಭನಕ್ಕೆ (Cardiac Arrest) ಒಳಗಾಗಿ ಉಮರ್ ಶಾ ಕೊನೆಯುಸಿರೆಳೆದಿದ್ದಾರೆ ಎಂದು ವರದಿ ತಿಳಿಸಿದೆ.
ಕುಟುಂಬ ಮತ್ತು ವೈದ್ಯಕೀಯ ವರದಿಗಳ ಪ್ರಕಾರ, ಉಮರ್ ಗೆ ಮೊದಲು ವಾಂತಿಯಾಗಿದೆ. ಇದು ಶ್ವಾಸಕೋಶಕ್ಕೆ ಸಮಸ್ಯೆ ತಂದಿದ್ದು, ಆ ಬಳಿಕ ಅವರು ನಿಧನ ಹೊಂದಿದ್ದಾರೆ ಎಂದು ವರದಿ ತಿಳಿಸಿದೆ.
ಉಮರ್ ಶಾ ನಿಧನದ ಸುದ್ದಿಯನ್ನು ಅವರ ಸಹೋದರ ಅಹಮದ್ ಶಾ ಅವರು ಹಂಚಿಕೊಂಡಿದ್ದಾರೆ.
ಇದು ಕುಟುಂಬವನ್ನು ಕಾಡಿದ ಎರಡನೇ ದುರಂತವಾಗಿದೆ. 2023ರ ನವೆಂಬರ್‌ನಲ್ಲಿ ಉಮರ್ ಅವರ ಕಿರಿಯ ಸಹೋದರಿ ಆಯೇಷಾ ನಿಧನ ಹೊಂದಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಉಮರ್ ಹಾಗೂ ಅವರ ಸಹೋದರ ಅಹಮದ್ ಅಪಾರ ಜನಪ್ರಿಯತೆಯನ್ನು ಹೊಂದಿದ್ದರು.
ARY ಡಿಜಿಟಲ್‌ನ ‘ಜೀತೋ ಪಾಕಿಸ್ತಾನ್’ ಮತ್ತು ‘ಶಾನ್-ಎ-ರಂಜಾನ್’ ನಂತಹ ಜನಪ್ರಿಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು ಉಮರ್ – ಅಹಮದ್ ಜನಪ್ರಿಯತೆಯನ್ನು ಹೊಂದಿದ್ದರು.
“ಪೀಚೆ ದೇಖೋ ಪೀಚೆ” ಎನ್ನುವ ರೀಲ್ಸ್ ಸೇರಿದಂತೆ ವಿವಿಧ ರೀಲ್ಸ್‌ಗಳ ಮೂಲಕ ಅಹಮದ್ – ಉಮರ್ ಖ್ಯಾತಿ ಗಳಿಸಿದ್ದರು.
ಉಮರ್ ಅವರ ಅಕಾಲಿಕ ನಿಧನಕ್ಕೆ ನಟ ಅದ್ನಾನ್ ಸಿದ್ಧಿಕಿ, ಏಜಾಜ್ ಅಸ್ಲಾಂ, ಮಹಿರಾ ಖಾನ್, ಹಿನಾ ಅಲ್ತಾಫ್, ಸೇರಿದಂತೆ ಹಲವು ಕಲಾವಿದರು ಸಂತಾಪ ಸೂಚಿಸಿದ್ದಾರೆ.