ಜೊಮಾಟೋ ಮಾರುಕಟ್ಟೆ ಕುಸಿತ ಆರೋಪ ನೋನ್ ಸೆನ್ಸ್ ಎಂದ ಸಿಇಒ

ಮುಂಬೈ :ಆಹಾರ ವಿತರಣಾ ಕಂಪನಿ ಜೊಮಾಟೋ ಸಿಇಒ ದೀಪಿಂದರ್ ಗೋಯಲ್ ಅವರು, ತಮ್ಮ ಕಂಪನಿಯು ಮಾರುಕಟ್ಟೆ ಪಾಲನ್ನು ಕಳೆದುಕೊಂಡು ಅವ್ಯವಸ್ಥೆಗೆ ಇಳಿದಿದೆ ಎಂಬ ರೆಡ್ಡಿಟ್ ಪೋಸ್ಟ್ನಲ್ಲಿ ಮಾಡಲಾದ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಅವರು ತಮ್ಮ ಎಕ್ಸ್ (ಹಳೆಯ ಟ್ವಿಟ್ಟರ್) ನಲ್ಲಿ ರೆಡ್ಡಿಟ್ ಪೋಸ್ಟ್ ಅನ್ನು ಹಂಚಿಕೊಂಡು, ಈ ಆರೋಪಗಳನ್ನು ಸಂಪೂರ್ಣ ಸುಳ್ಳು ಎಂದಿದ್ದಾರೆ.
ಜೊತೆಗೆ ಕಂಪನಿಯು ಮಾರುಕಟ್ಟೆ ಪಾಲನ್ನು ಕಳೆದುಕೊಳ್ಳುತ್ತಿಲ್ಲ ಎಂದು ಪುನರುಚ್ಚರಿಸಿದ್ದಾರೆ. “ಇದನ್ನು ಸ್ಪಷ್ಟಪಡಿಸುವುದು ಸಹ ಮುಜುಗರದ ಸಂಗತಿ – ಆದರೆ ಅನೇಕ ಜನರು ಕಳವಳದಿಂದ ನನ್ನನ್ನು ಕೇಳಿದ್ದರಿಂದ ಹಾಗೆ ಮಾಡುತ್ತಿದ್ದೇನೆ” ಎಂದು ಅವರು ಬರೆದಿದ್ದಾರೆ, ನಾವು ಮಾರುಕಟ್ಟೆ ಪಾಲನ್ನು ಕಳೆದುಕೊಳ್ಳುತ್ತಿಲ್ಲ, ಮತ್ತು ನಮ್ಮ ಉದ್ಯೋಗಿಗಳಿಗೆ ಜೊಮಾಟೋದಲ್ಲಿಯೇ ಆರ್ಡರ್ ಮಾಡಬೇಕು ಎಂದು ಒತ್ತಾಯಿಸುವುದಿಲ್ಲ. ಆಯ್ಕೆಯ ಸ್ವಾತಂತ್ರ್ಯವನ್ನು ನಾವು ಬಲವಾಗಿ ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ.
ಪೋಸ್ಟ್ನಲ್ಲಿ, ಜೊಮಾಟೋ ವಿತರಣಾ ಸಹಯೋಗಿಗಳು ಕಡಿಮೆ ವೇತನ ಪಡೆದು ಹೆಚ್ಚು ಕೆಲಸ ಮಾಡುತ್ತಿದ್ದಾರೆ ಎಂದು ವಿಶೇಷವಾಗಿ ಹೈಲೈಟ್ ಮಾಡಲಾಗಿದೆ. ಇದರಿಂದ ಅನೇಕ ವಿತರಣಾ ಸವಾರರು ಜೊಮಾಟೋವನ್ನು ತೊರೆದು ಸ್ವಿಗ್ಗಿ ಮತ್ತು ಜೆಪ್ಟೋ ಜತೆ ಸೇರಿಕೊಳ್ಳುತ್ತಿದ್ದಾರೆ. ಗ್ರಾಹಕರು ನಿರಾಶರಾಗಿದ್ದಾರೆ, ಸವಾರರು ನಿರಾಶರಾಗಿದ್ದಾರೆ, ರೆಸ್ಟೋರೆಂಟ್ ಪಾಲುದಾರರು ನಿರಾಶರಾಗಿದ್ದಾರೆ. ಇದು ಒಂದು ವಿಷವರ್ತುಲವಾಗಿದೆ ಎಂದು ಆ ಪೋಸ್ಟ್ ಹೇಳುತ್ತದೆ. ಹೊರಗೆ ಜೊಮಾಟೋ ಬಣ್ಣ ಬೀರುವಂತೆ ಕಂಡರೂ, ಒಳಗೆ ತೀವ್ರ ಗೊಂದಲ ಮತ್ತು ಕುಸಿತ ಮುಂದುವರಿದಿದೆ ಎಂದು ಆರೋಪಿಸಲಾಗಿದೆ.