ರೋಗಿಯಂತೆ ನಟಿಸಿ ವೈದ್ಯೆಯ ಐಫೋನ್ ಕದ್ದ ಕಳ್ಳ: 60 ನಿಮಿಷದಲ್ಲಿ ಕಾನ್ಪುರ ಪೊಲೀಸರಿಗೆ ಸೆರೆ

ಕಾನ್ಪುರ: ಆಸ್ಪತ್ರೆಯಲ್ಲಿ ರೋಗಿಯಂತೆ ನಟಿಸಿ ವೈದ್ಯೆಯ ಕೋಟ್ ನ ಕಿಸೆಯಲ್ಲಿದ್ದ ಐಫೋನ್ ಎಗರಿಸಿದ ಕಳ್ಳನೋರ್ವನನ್ನು ಪೊಲೀಸರು ಕೇವಲ ೬೦ ನಿಮಿಷದಲ್ಲೇ ಬಂಧಿಸಿರುವ ಅಪರೂಪದ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಗುಜರಾತ್ ಮೂಲದ ಮೊಹಮ್ಮದ್ ಫಯಾಜ್ ಎಂದು ಗುರುತಿಸಲಾಗಿದೆ.
ಏನಿದು ಪ್ರಕರಣ:
ಅಂದ ಹಾಗೆ ಈ ಘಟನೆ ನಡೆದಿರುವುದು ಆ.20 ರಂದು ಫಯಾಜ್ ಕಾನ್ಪುರದ ಹ್ಯಾಲೆಟ್ ಆಸ್ಪತ್ರೆಗೆ ಬಂದಿದ್ದಾನೆ, ಆಸ್ಪತ್ರೆಯ ಕಾರಿಡಾರ್‌ನಲ್ಲಿ ಅಂಗವಿಕಲನಂತೆ ನಟಿಸುತ್ತಾ, ಕೋಲು ಹಿಡಿದು ಕುಂಟುತ್ತಾ, ಕೈಯಲ್ಲಿ ವೈದ್ಯರ ಪ್ರಿಸ್ಕ್ರಿಪ್ಷನ್ ಹಿಡಿದುಕೊಂಡು ನಡೆದು ಆಚೆ ಈಚೆ ಹೋಗಿದ್ದಾನೆ. ಈ ವೇಳೆ ಇಬ್ಬರು ಮಹಿಳಾ ವೈದ್ಯರು ಮಾತನಾಡುತ್ತಿರುವುದನ್ನು ಗಮನಿಸಿ ಅವರ ಬಳಿ ಕುಂಟುತ್ತಾ ಹೋಗಿ ಯಾರಿಗೂ ಗೊತ್ತಾಗದ ರೀತಿಯಲ್ಲಿ ವೈದ್ಯೆಯ ಕೋಟ್‌ನ ಜೇಬಿನಿಂದ ಐಫೋನ್ ಎಗರಿಸಿ ಮತ್ತೆ ಕುಂಟುತ್ತಾ ಆಸ್ಪತ್ರೆಯಿಂದ ಹೊರಬಂದಿದ್ದಾನೆ. ಇದಾದ ಕೆಲ ಹೊತ್ತಿನ ಬಳಿಕ ಮಹಿಳಾ ವೈದ್ಯೆ ತನ್ನ ಮೊಬೈಲ್ ತೆಗೆಯಲು ಕೋಟ್ ನ ಕಿಸೆಗೆ ಕೈ ಹಾಕಿದಾಗ ಮೊಬೈಲ್ ಇರಲಿಲ್ಲ ಬಳಿಕ ತಾನು ಕುಳಿತ್ತಿದ್ದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾಳೆ ಕೊನೆಗೆ ಎಲ್ಲೂ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.
60 ನಿಮಿಷದಲ್ಲಿ ಕಳ್ಳ ಸೆರೆ:
ಮಹಿಳಾ ವೈದ್ಯೆ ನೀಡಿದ ದೂರಿನ ಆಧಾರದ ಮೇಲೆ ಆಸ್ಪತ್ರೆಗೆ ಬಂದ ಪೊಲೀಸರು ಆಸ್ಪತ್ರೆಯಲ್ಲಿನ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದ್ದಾರೆ ಈ ವೇಳೆ ಕುಂಟುತ್ತಾ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬ ವೈದ್ಯೆಯ ಕೋಟ್ ನ ಕಿಸೆಯಲ್ಲಿದ್ದ ಫೋನ್ ಕಡಿಯುತ್ತಿರುವುದು ಕಂಡು ಬಂದಿದೆ ಅಲ್ಲದೆ ಆತನ ಎಲ್ಲ ದೃಶ್ಯಗಳನ್ನು ಪರಿಶೀಲನೆ ನಡೆಸಿದ ವೇಳೆ ಆತ ಆಸ್ಪತ್ರೆಯ ಆವರಣದಿಂದ ನಡೆದುಕೊಂಡು ಹೋಗಿರುವುದು ಕಂಡುಬಂದಿದೆ, ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಮೊಬೈಲ್ ಲೊಕೇಶನ್ ಟ್ರೇಸ್ ಮಾಡಿ ಕೇವಲ 60 ನಿಮಿಷದಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಹಿಂದೆಯೂ ಕೃತ್ಯ ಎಸಗಿದ್ದ:
ಪೊಲೀಸರ ವಿಚಾರಣೆ ವೇಳೆ ಆರೋಪಿ ಫಯಾಜ್ ಈ ಹಿಂದೆಯೂ ಇದೇ ರೀತಿ ಮೊಬೈಲ್ ಕಳ್ಳತನ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾನೆ.