ಬಕ್ರೀದ್ ಆಡುಗಳಿಗಾಗಿ ರಾಜಸ್ಥಾನ ಹೋದ ಯುವಕ ನಾಪತ್ತೆ: ಕುಟುಂಬ ಆತಂಕದಲ್ಲಿ!

ಉಪ್ಪಿನಂಗಡಿ: ಮುಂಬರುವ ಬಕ್ರೀದ್ ಹಬ್ಬಕ್ಕೆಂದು ಆಡು ತರಲೆಂದು ಸ್ನೇಹಿತರೊಂದಿಗೆ ರಾಜಸ್ಥಾನಕ್ಕೆ ಹೋದ 34 ನೆಕ್ಕಿಲಾಡಿಯ ಮುಹಮ್ಮದ್ ಝಬೈರ್ ಆರೀಸ್ ಬಳಿಕ ಸಂಪರ್ಕಕ್ಕೆ ಸಿಗದಿರುವುದರಿಂದ ಕುಟುಂಬ ಕಂಗಾಲಾಗಿದೆ.
ಈ ಬಗ್ಗೆ ಮಾಧ್ಯಮಕ್ಕೆ ತಿಳಿಸಿದ ಅವರ ತಂದೆ ಇಬ್ರಾಹಿಂ, ನನ್ನ ಮಗ ಹಾಗೂ ಆತನ ಸ್ನೇಹಿತ ಆಡುಗಳನ್ನು ತರಲೆಂದು ಕಳೆದ ಸೋಮವಾರ ರಾಜಸ್ಥಾನಕ್ಕೆ ತೆರಳಿದ್ದರು.

ಮೊದಲು ಲಾರಿ ಬಾಡಿಗೆ 2 ಲಕ್ಷ ರೂ. ನೀಡುವುದು, ಆಡು ಇಲ್ಲಿಗೆ ತಲುಪಿದ ಬಳಿಕ ಉಳಿದ ಹಣವನ್ನು ನೀಡುವುದು ಎಂದು ಅಲ್ಲಿನವರೊಂದಿಗೆ ಒಪ್ಪಂದ ಮಾಡಲಾಗಿತ್ತು. ಆದರೆ ಅಲ್ಲಿಗೆ ತಲುಪಿದ ಬಳಿಕ 10 ಲಕ್ಷ ರೂ. ಕೊಡದಿದ್ದಲ್ಲಿ ಆಡುಗಳನ್ನು ಕೊಡುವುದಿಲ್ಲ ಎಂದು ಅಲ್ಲಿನವರು ತಿಳಿಸಿದ್ದರು.
ಇದಕ್ಕೆ ಹಣ ಹೊಂದಿಸುವಂತೆ ಮಗ ನಮಗೆ ದೂರವಾಣಿ ಮೂಲಕ ತಿಳಿಸಿದ್ದ. ಅದರಂತೆ ಹಣವನ್ನು ಆತನ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಯಿತು. ಆಗ ಆಡುಗಳನ್ನು ಲಾರಿಯಲ್ಲಿ ಹಾಕಿ ಕಳುಹಿಸಲಾಗುತ್ತಿದೆ ಎಂದು ಮಗ ತಿಳಿಸಿ ಫೋಟೋವನ್ನೂ ಕಳಿಸಿದ್ದ. ಆದರೆ ಬಳಿಕ ಫೋನ್ ಮಾಡಿದ ಮಗ, ಇಲ್ಲಿನವರು ಇನ್ನೂ 20 ಲಕ್ಷ ರೂ. ನೀಡುವಂತೆ ಆಗ್ರಹಿಸುತ್ತಿದ್ದಾರೆ.
ಮಧ್ಯಾಹ್ನದೊಳಗೆ ಹಣ ಕೊಡದಿದ್ದರೆ ಆಡು ನೀಡುವುದಿಲ್ಲ ಹಾಗೂ ನನ್ನನ್ನೂ ಹೋಗಲು ಬಿಡುವುದಿಲ್ಲ ಎಂದು ಬೆದರಿಸುತ್ತಿದ್ದಾರೆ ಎಂದು ತಿಳಿಸಿದ್ದ. ಬಳಿಕ ಆತನ ಫೋನ್ ಸ್ವಿಚ್ ಆಫ್ ಆಗಿದೆ. ಇಲ್ಲಿನ ಪೊಲೀಸರು ನೀಡಿದ ನಂಬರ್ ಮೂಲಕ ರಾಜಸ್ಥಾನದ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಲಾಯಿತು. ಅದಕ್ಕೆ ಸ್ಪಂದಿಸಿರುವ ಪೊಲೀಸರು, ನನ್ನ ಮಗ ಸಹಿತ ಇತರರು ಇರುವ ಸ್ಥಳ ಪತ್ತೆ ಮಾಡಿ ಅವರನ್ನೆಲ್ಲ ಪೊಲೀಸ್ ಠಾಣೆಗೆ ಕರೆ ತರಲಾಗಿದೆ ಎಂದು ತಿಳಿಸಿದ್ದಾರೆ. ಇಷ್ಟಾದರೂ ಮಗ ದೂರವಾಣಿ ಸಂಪರ್ಕಕ್ಕೆ ಸಿಕ್ಕಿಲ್ಲ. ಮತ್ತೆ ಇಲ್ಲಿನ ಪೊಲೀಸರಿಗೆ ಕರೆ ಮಾಡಿದಾಗ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ. ನಾವು ತುಂಬಾ ಆತಂಕದಲ್ಲಿದ್ದು, ಮಗನ ರಕ್ಷಣೆಗೆ ಶಾಸಕರು ಮುಂದಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.