AI ಸಲಹೆ ಕೇಳಿ ಯುವಕ ಆತ್ಮಹ*ತ್ಯೆ: ಚಾಟ್ ಜಿಪಿಟಿ ಚಾಟಿಂಗ್ ಈಗ ಪ್ರಾಣಕ್ಕೆ ಸಂಚಕಾರ!

ಇದು ಎಐ ಯುಗ. ಇಂದು ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೃತಕ ಬುದ್ಧಿಮತ್ತೆ (AI) ಬಳಕೆಯಾಗುತ್ತಿದೆ. ಅದರಲ್ಲೂ ಎಐ ಆಧಾರಿತ ಟೂಲ್ ಆಗಿರುವ ಚಾಟ್ ಜಿಪಿಟಿಯುವಜನತೆಯನ್ನು ಹೆಚ್ಚಾಗಿ ತನ್ನತ್ತ ಸೆಳೆಯುತ್ತಿದೆ. ಮನುಷ್ಯನ ಭಾವನೆಗಳನ್ನು ಅರ್ಥಮಾಡಿಕೊಳ್ಳುವಂತೆ, ಪ್ರತಿಯೊಂದು ಮಾತಿಗೂ ಪ್ರತಿಕ್ರಿಯೆ ನೀಡುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.

ಒಳ್ಳೆಯದಿರಲಿ ಅಥವಾ ಕೆಟ್ಟದಿರಲಿ, ಚಾಟ್ ಜಿಪಿಟಿಯೊಂದಿಗೆ ಮುಕ್ತವಾಗಿ ಮಾತನಾಡಿ ಅದು ನೀಡುವ ಸಲಹೆಗಳನ್ನು ಅನುಸರಿಸುವವರು ಹೆಚ್ಚಾಗುತ್ತಿದ್ದಾರೆ. ಈ ಪ್ರವೃತ್ತಿ ವಿಶೇಷವಾಗಿ ಯುವ ಪೀಳಿಗೆಯಲ್ಲಿ ಹೆಚ್ಚು ಕಾಣಿಸುತ್ತಿದೆ.
ಇದೇ ಹಿನ್ನೆಲೆಯಲ್ಲಿ, ಅಮೆರಿಕದಲ್ಲಿ ಚಾಟ್ ಜಿಪಿಟಿಯ ಸಲಹೆಗಳನ್ನು ಕೇಳಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಎಲಾನ್ ಮಸ್ಕ್ ಅವರು ತಮ್ಮ ಅಧಿಕೃತ ಟ್ವಿಟರ್ (X) ಖಾತೆ @elonmusk ನಲ್ಲಿ ಒಂದು ಪೋಸ್ಟ್ ಅನ್ನು ರೀಟ್ವೀಟ್ ಮಾಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೇಲಿನ ವಿಡಿಯೋದಲ್ಲಿ, ತಾಯಿಯೊಬ್ಬರು ತಮ್ಮ ಟೀನೇಜ್ ಮಗನ ಸಾವಿಗೆ ಚಾಟ್ ಜಿಪಿಟಿಯೇ ಕಾರಣ ಎಂದು ಆರೋಪಿಸುತ್ತಾರೆ. ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದ ತನ್ನ ಮಗ, ತನ್ನ ಭಾವನೆಗಳನ್ನು ಚಾಟ್ ಜಿಪಿಟಿಯ ಮುಂದೆ ಹಂಚಿಕೊಂಡಿದ್ದ. ಆದರೆ ಆತನ ನಕಾರಾತ್ಮಕ ಆಲೋಚನೆಗಳನ್ನು ತಡೆಯುವ ಬದಲು, ಚಾಟ್ ಜಿಪಿಟಿ ಅವುಗಳನ್ನು ಪ್ರೋತ್ಸಾಹಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ, ಪ್ರಾಣ ತೆಗೆಯುವ ವಿಧಾನಗಳ ಬಗ್ಗೆ ಸಹ ಚಾಟ್ ಜಿಪಿಟಿ ಸಲಹೆ ನೀಡಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಘಟನೆ ಬಳಿಕ, ಮಕ್ಕಳು ಮತ್ತು ಯುವಕರು ಎಐ ಟೂಲ್‌ಗಳನ್ನು ಬಳಸುವ ಬಗ್ಗೆ ಆತಂಕಗಳು ಹೆಚ್ಚಾಗಿವೆ.

ಮಕ್ಕಳು ಚಾಟ್ ಜಿಪಿಟಿ ಬಳಸುತ್ತಿದ್ದರೆ ಪೋಷಕರು ಎಚ್ಚರ ವಹಿಸುವುದು ಅತ್ಯಗತ್ಯ:
ಚಾಟ್ ಜಿಪಿಟಿಯನ್ನು ಮಕ್ಕಳು ತಮ್ಮ ಅಧ್ಯಯನ, ಭಾಷಾ ಅಭ್ಯಾಸ, ಸಾಮಾನ್ಯ ಜ್ಞಾನ ಹಾಗೂ ಸೃಜನಶೀಲ ಬರವಣಿಗೆ ಮುಂತಾದ ಉತ್ತಮ ಉದ್ದೇಶಗಳಿಗೆ ಬಳಸಬಹುದು. ಆದರೆ ಇದು ಪೋಷಕರ ಮೇಲ್ವಿಚಾರಣೆಯೊಂದಿಗೆ ನಡೆಯಬೇಕು. ಚಿಕ್ಕ ಮಕ್ಕಳನ್ನು ಒಬ್ಬಂಟಿಯಾಗಿ ಬಳಸಲು ಬಿಡದೇ, ಅವರು ಏನು ಕೇಳುತ್ತಿದ್ದಾರೆ, ಯಾವ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದಾರೆ ಎಂಬುದನ್ನು ಗಮನಿಸುವುದು ಮುಖ್ಯ. ಅತಿಯಾದ ಅವಲಂಬನೆ ತಪ್ಪಿಸಲು ಬಳಕೆಗೆ ಸಮಯ ಮಿತಿಯನ್ನೂ ನಿಗದಿಪಡಿಸಬೇಕು.
ಅತ್ಯಂತ ಮುಖ್ಯವಾಗಿ, ಪೋಷಕರು ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಬೇಕು. ಅವರನ್ನು ಸ್ನೇಹಿತರಂತೆ ನೋಡಿಕೊಂಡು, ಮುಕ್ತವಾಗಿ ಮಾತನಾಡುವ ವಾತಾವರಣವನ್ನು ನಿರ್ಮಿಸಬೇಕು. ಮಕ್ಕಳ ಸಮಸ್ಯೆಗಳನ್ನು ಆಲಿಸುವುದು ಮತ್ತು ಅವರ ಮನಸ್ಸಿನ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಪ್ರತಿಯೊಬ್ಬ ಪೋಷಕರ ಆದ್ಯ ಕರ್ತವ್ಯ ಎಂದು ಮನೋವೈದ್ಯರು ಸಲಹೆ ನೀಡುತ್ತಾರೆ.