ಪ್ರವಾಹದಿಂದ ದಾಟಲಾಗದ ಮಕ್ಕಳನ್ನು ಮಾನವ ಸೇತುವೆ ನಿರ್ಮಿಸಿ ಕಾಪಾಡಿದ ಯುವಕರು

ಚಂದಿಘಡ:ಎಲ್ಲಿ ನೋಡಿದ್ರೂ ಮಳೆ ಅವಾಂತರ. ಹಲವೆಡೆ ನದಿ, ಕೆರೆ ತುಂಬಿ ಹರಿಯುತ್ತಿದ್ದು, ರಸ್ತೆ ಸಂಪರ್ಕಗಳು ಕಡಿತವಾಗುತ್ತಿದೆ. ಕೆಲವೆಡೆ ಮರ ಬಿದ್ದು, ಮತ್ತೊಂದೆಡೆ ವಿದ್ಯುತ್ ಕಂಬ ಬಿದ್ದು ಸಂಪರ್ಕ ಕಡಿತವಾದರೆ ಮತ್ತೂ ಕೆಲವಡೆ ರಸ್ತೆಗಳೇ (Road) ಕೊಚ್ಚಿಕೊಂಡು ಹೋಗಿವೆ.

ಇಂತಹ ಘಟನೆಗಳ ನಡುವೆ ಪಂಜಾಬ್ನ (Punjab) ಯುವಕರ ಗುಂಪೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದಾರೆ.
ಹೌದು, ಕೊಚ್ಚಿ ಹೋದ ರಸ್ತೆಯಲ್ಲಿ ನೀರು ಧುಮ್ಮಿಕ್ಕಿ ಹರಿಯುತ್ತಿದ್ದಾಗ ಹೀರೋಗಳಂತೆ ಆಗಮಿಸಿದ ಸ್ಥಳೀಯ ಯುವಕರು ಸುಮಾರು 35 ಮಕ್ಕಳನ್ನು ತಮ್ಮ ಬೆನ್ನನ್ನೇ ಸೇತುವೆಯನ್ನಾಗಿಸಿ (Human Bridge) ದಾಟಿಸಿದ್ದಾರೆ. ಇದರ ವಿಡಿಯೋ ಭಾರೀ ವೈರಲ್ ಆಗುತ್ತಿದ್ದು, ಯುವಕರ ಸಾಹಸಕ್ಕೆ ಎಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ಈ ಘಟನೆ ಪಂಜಾಬ್ನ ಚಂಡೀಗಢದಿಂದ ಪಶ್ಚಿಮಕ್ಕೆ 160 ಕಿ.ಮೀ ದೂರದಲ್ಲಿರುವ ಮೊಗ (Moga) ಜಿಲ್ಲೆಯ ಮಲ್ಲೇನಾ (Malleana) ಗ್ರಾಮದಲ್ಲಿ ನಡೆದಿದೆ. ಬುಧವಾರ ಇಲ್ಲಿನ ಮುಖ್ಯ ರಸ್ತೆಯೇ ಭೀಕರ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ. ಈ ವೇಳೆ ಶಾಲಾ ಮಕ್ಕಳು ರಸ್ತೆ ಕಡಿತದಿಂದಾಗಿ ಅದನ್ನು ದಾಟಲು ಕಷ್ಟಪಡುತ್ತಿದ್ದಾಗ ಯುವಕರು ಸಹಾಯಕ್ಕೆ ದೇವರಂತೆ ಆಗಮಿಸಿದ್ದಾರೆ.
ಇಬ್ಬರು ಯುವಕರು ಬಿರುಕು ಬಿಟ್ಟ ರಸ್ತೆಯ ಮೇಲೆ ಧುಮ್ಮಿಕ್ಕುವ ನೀರಿನ ನಡುವೆಯೂ ಅದರ ಮೇಲೆ ಮಲಗಿ, ತಮ್ಮ ಬೆನ್ನನ್ನೇ ಸೇತುವೆಯನ್ನಾಗಿಸಿ ಮಕ್ಕಳನ್ನು ಸುರಕ್ಷಿತವಾಗಿ ದಾಟಿಸಿದ್ದಾರೆ. ಇತರ ಯುವರು ಕೂಡಾ ಮಕ್ಕಳನ್ನು ದಾಟಿಸಲು ನೆರವಾಗಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಇಬ್ಬರು ಯುವಕರು ಇಂಟರ್ನೆಟ್ ಸೆಲೆಬ್ರಿಟಿಗಳಾಗಿದ್ದಾರೆ. ಸುಖ್ಬಿಂದರ್ ಹಾಗೂ ಗಗನ್ದೀಪ್ ಎಂದು ಅವರನ್ನು ಗುರುತಿಸಲಾಗಿದ್ದು, ಮಾಧ್ಯಮಗಳು ಅವರನ್ನು ಸಂಪರ್ಕಿಸಿದೆ. ಈ ಘಟನೆ ಬಗ್ಗೆ ಅವರನ್ನು ಕೇಳಿದಾಗ, ನಾವು ಹಳ್ಳಿಯ ಜನರು, ನಮಗೆ ಇದೆಲ್ಲಾ ಕಾಮನ್. ಯಾರೋ ಒಬ್ಬರು ಇದರ ವೀಡಿಯೊ ತೆಗೆದಿದ್ದಾರೆ. ಮತ್ತು ಅದು ಎಲ್ಲೆಡೆ ವೈರಲ್ ಆಗಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ವಿವರಣೆ ನೀಡಿದ ಅವರು, ಬುಧವಾರ ಬೆಳಗ್ಗೆ ಮಲ್ಲೇನಾ ಗ್ರಾಮದ ಮಕ್ಕಳು ಶಾಲಾ ಬಸ್ ಹತ್ತಿ ಶಾಲೆಗೆ ಹೋಗಿದ್ದರು. ಆದರೆ ಅರ್ಧಕ್ಕೆ ರಜೆ ಕೊಟ್ಟಿದ್ದರಿಂದ ಮಧ್ಯಾಹ್ನ ವಾಪಸಾಗಿದ್ದರು . ಆದರೆ ಅವರು ವಾಪಸಾಗುವಾಗ ಬೆಳಗ್ಗೆ ಇದ್ದ ರಸ್ತೆ ಮಾಯವಾಗಿತ್ತು. 8 ಅಡಿ ಉದ್ದದ ಬಿರುಕು ದಾಟಲು ಸಾಧ್ಯವಾಗದೆ ವಾಹನಗಳು ಮತ್ತು ಜನರು ಎರಡೂ ಬದಿಗಳಲ್ಲಿ ಅಸಹಾಯಕರಾಗಿ ನಿಂತಿದ್ದರು. ಮಲ್ಲೇನಾ ಗ್ರಾಮದ ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ ಕೂಡ ಅಲ್ಲೇ ನಿಂತಿತ್ತು.
ಮಕ್ಕಳು ರಸ್ತೆಯ ಎರಡು ಬದಿಗಳಲ್ಲಿ ಅಸಹಾಯಕರಾಗಿ ನಿಂತಿರುವದನ್ನು ಕಂಡು ನಾವು ಅವರಿಗೆ ಸಹಾಯ ಮಾಡಲು ನಿರ್ಧರಿಸಿದೆವು. ನಮ್ಮಲ್ಲಿ ಇಬ್ಬರು ಮಾನವ ಸೇತುವೆ ರೂಪಿಸಿ, ನಮ್ಮ ಬೆನ್ನ ಮೇಲೆಯೇ ಮಕ್ಕಳಿಗೆ ದಾಟಲು ಅವಕಾಶ ಮಾಡಿಕೊಟ್ಟೆವು. ಇದೇನೂ ದೊಡ್ಡ ವಿಷಯವಲ್ಲ, ಇದೆಲ್ಲಾ ಇಲ್ಲಿ ಕಾಮನ್ ಎಂದು ಅವರು ಹೇಳಿದ್ದಾರೆ.
