ಆನ್ಲೈನ್ ಗೇಮ್ ಸಾಲ ತೀರಿಸಲು ವೃದ್ಧೆಯ ಕೊ*ಲೆ ಮಾಡಿದ ಯುವಕ ಅರೆಸ್ಟ್

ದಾವಣಗೆರೆ: ಆನ್‌ಲೈನ್ ಗೇಮ್ ವ್ಯಸನದಿಂದ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ ಯುವಕನೊಬ್ಬ ಸಾಲ ತೀರಿಸಲು ವೃದ್ಧೆಯೊಬ್ಬರನ್ನು ಹತ್ಯೆ ಮಾಡಿ ಚಿನ್ನ ದೋಚಿದ ಪ್ರಕರಣ ದಾವಣಗೆರೆ (Davanagere) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ಫೆಬ್ರವರಿ 2ರಂದು ಈ ಘಟನೆ ನಡೆದಿತ್ತು. ಗ್ರಾಮದ ಒಂಟಿ ವೃದ್ಧೆ ಕಮಲಮ್ಮ (64) ಅವರನ್ನು ಮನೆಗೆ ನುಗ್ಗಿ ಹತ್ಯೆ ಮಾಡಿ, ಸುಮಾರು 8.44 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಲಾಗಿತ್ತು. ಪ್ರಕರಣ ಸಂಬಂಧ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿ ಗ್ರಾಮದ ನಿವಾಸಿ ಅಭಿಷೇಕ (23) ಎಂಬ ಯುವಕನನ್ನು ಬಂಧಿಸಲಾಗಿದೆ.

ಪೊಲೀಸರ ತನಿಖೆಯಲ್ಲಿ ತಿಳಿದುಬಂದಿರುವ ಪ್ರಕಾರ, ಅಭಿಷೇಕ ಆನ್‌ಲೈನ್ ಗೇಮ್ ಆಡುತ್ತಾ 20ರಿಂದ 25 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ. ಸಾಲಗಾರರ ಒತ್ತಡದಿಂದ ಮನೆ ಬಿಟ್ಟು ಸುತ್ತಾಡುತ್ತಿದ್ದ ಆತ, ರಾತ್ರಿ ವೇಳೆ ಬಸ್ ನಿಲ್ದಾಣಗಳಲ್ಲಿ ವಾಸಿಸುತ್ತಿದ್ದ. ಇದೇ ವೇಳೆ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ದೇವರ ಹಬ್ಬ ನಡೆಯುತ್ತಿರುವುದು ತಿಳಿದು ಫೆಬ್ರವರಿ 2ರಂದು ಗ್ರಾಮಕ್ಕೆ ತೆರಳಿದ್ದ.

ಹಬ್ಬಕ್ಕೆ ಚಿನ್ನಾಭರಣ ಧರಿಸಿ ದೇವಸ್ಥಾನಕ್ಕೆ ಹೋಗಿದ್ದೇ ಮುಳುವಾಯ್ತು
ಹಬ್ಬದ ನಿಮಿತ್ತ ಚಿನ್ನಾಭರಣ ಧರಿಸಿಕೊಂಡು ದೇವಾಲಯಕ್ಕೆ ಬಂದಿದ್ದ ಕಮಲಮ್ಮ ಅವರನ್ನು ಗಮನಿಸಿದ್ದ ಆತ, ಅವರ ಮನೆ ಹಿಂಬಾಗಿಲಿನಿಂದ ಒಳನುಗ್ಗಿ ಅಡಗಿ ಕುಳಿತಿದ್ದಾನೆ. ತಡರಾತ್ರಿ ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಬಳಿಕ ಕಮಲಮ್ಮ ಅವರ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ.
ಕದ್ದ ಚಿನ್ನ ಅಡವಿಟ್ಟು ಸಾಲ ಪಡೆದಿದ್ದ ಖತರ್ನಾಕ್!
ದೋಚಿದ ಚಿನ್ನವನ್ನು ಶಿಕಾರಿಪುರದ ವಿವಿಧ ಬ್ಯಾಂಕ್‌ಗಳಲ್ಲಿ ಅಡವಿಟ್ಟು ಹಣ ಪಡೆದಿದ್ದ ಆತ, ಆ ಹಣದಿಂದ ಮತ್ತೆ ಆನ್‌ಲೈನ್ ಗೇಮ್ ಆಡಲು ಆರಂಭಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯರ ಸಹಕಾರ ಮತ್ತು ಸೂಕ್ತ ಮಾಹಿತಿ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ದಾವಣಗೆರೆ ಎಸ್ಪಿ ಎಚ್.ಟಿ. ಶೇಖರ ಮಾಹಿತಿ ನೀಡಿದ್ದು, ಆರೋಪಿಯಿಂದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಪ್ರಕರಣದ ಕುರಿತ ತನಿಖೆ ಮುಂದುವರಿದಿದೆ.