ನಟ ಸಂತೋಷ್ ಬಾಲರಾಜ್ ಆರೋಗ್ಯ ಸ್ಥಿತಿ ಗಂಭೀರ: ಜಾಂಡೀಸ್‌ನಿಂದ ಕೋಮಾಕ್ಕೆ ಜಾರಿದ ನಟ

ಬೆಂಗಳೂರು: ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಭರವಸೆ ಮೂಡಿಸಿದ್ದ ಯುವ ನಟ 34 ವರ್ಷದ ಸಂತೋಷ್ ಬಾಲರಾಜ್ ಅವರ ಪರಿಸ್ಥಿತಿ ಗಂಭೀರವಾಗಿದೆ. ಜಾಂಡೀಸ್‌ನಿಂದ ಬಳಲುತ್ತಿರುವ ಸಂತೋಷ್ ಬಾಲರಾಜ್ ಅವರ ಪರಿಸ್ಥಿತಿ ತೀರಾ ಗಂಭೀರವಾಗಿದ್ದು, ಕೋಮಾಕ್ಕೆ ಜಾರಿದ್ದಾರೆ ಎನ್ನಲಾಗಿದೆ.

ಸ್ಯಾಂಡಲ್‌ವುಡ್‌ಗೆ ಹಲವು ಸಿನಿಮಾಗಳನ್ನು ನೀಡಿದ ನಿರ್ಮಾಪಕ ಆನೇಕಲ್ ಬಾಲರಾಜ್ ಅವರ ಪುತ್ರ ಸಂತೋಷ್ ಬಾಲರಾಜ್. ಸಣ್ಣ ವಯಸ್ಸಿಗೆ ಜಾಂಡೀಸ್‌ನಿಂದ ಬಳಲುತ್ತಿರುವ ಸಂತೋಷ್ ಈಗ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಜಾಂಡೀಸ್ ತೀವ್ರವಾಗಿರುವ ಕಾರಣ ಅವರನ್ನು ಕುಮಾರಸ್ವಾಮಿ ಲೇಔಟ್ ನ ಸಾಗರ್ ಅಫೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಯಾಂಡಲ್‌ವುಡ್‌ನಲ್ಲಿ ಕರಿಯಾ 2, ಕೆಂಪ, ಗಣಪ, ಬರ್ಕ್ಲಿ, ಸತ್ಯ ಸಿನಿಮಾಗಳಲ್ಲಿ ಸಂತೋಷ್ ಬಾಲರಾಜ್ ನಾಯಕನಾಗಿ ನಟಿಸಿದ್ದರು.
ಸಂತೋಷ್ ಬಾಲರಾಜ್ ಅವರ ಮೈಗೆಲ್ಲಾ ಜಾಂಡೀಸ್ ಹರಡಿದ್ದು, ಪರಿಸ್ಥಿತಿ ತೀರಾ ಗಂಭೀರವಾಗಿದೆ ಎನ್ನಲಾಗಿದೆ. ಸಂತೋಷ್ ಬಾಲರಾಜ್ ಅಮ್ಮನ ಜೊತೆ ವಾಸವಿದ್ದರು. ಅಪ್ಪ ಅನೇಕಲ್ ಬಾಲರಾಜ್ ದರ್ಶನ್ ತೂಗುದೀಪ ಅವರ ಕರಿಯ ಸಿನಿಮಾದ ನಿರ್ಮಾಪಕರಾಗಿದ್ದರು. ಅವಿವಾಹಿತರಾಗಿದ್ದ ಸಂತೋಷ್ ಬಾಲರಾಜ್, ಈಗ ಕೋಮಾದಲ್ಲಿದ್ದು ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದೆ.
ನಿರ್ಮಾಪಕ ಆನೇಕಲ್ ಬಾಲರಾಜ್ ಅವರ ಪುತ್ರ ಸಂತೋಷ್ ಬಾಲರಾಜ್ ಅವರ ಸಿನಿಮಾ ಪಯಣವು 2009ರಲ್ಲಿ ‘ಕೆಂಪ’ ಚಿತ್ರದ ಮೂಲಕ ನಾಯಕನಾಗಿ ಪ್ರಾರಂಭವಾಯಿತು. ಈ ಚಿತ್ರವನ್ನು ಅವರ ತಂದೆಯೇ ನಿರ್ಮಿಸಿದ್ದರು. ನಂತರದ ದಿನಗಳಲ್ಲಿ ಸಂತೋಷ್ ‘ಒಲವಿನ ಓಲೆ’ ಎಂಬ ಕೌಟುಂಬಿಕ ಚಿತ್ರದಲ್ಲಿ ಮತ್ತು 2013ರಲ್ಲಿ ‘ಜನ್ಮಾ’ ಎಂಬ ಆಕ್ಷನ್ ಚಿತ್ರದಲ್ಲಿ ನಟಿಸಿದರು. ‘ಒಲವಿನ ಓಲೆ’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೆ, ‘ಜನ್ಮಾ’ ಚಿತ್ರವು ಉತ್ತಮ ವಿಮರ್ಶೆಗಳನ್ನು ಗಳಿಸಿತು.
ಇದೇ ರೀತಿ, ಸಂತೋಷ್ ಅವರ ತಂದೆ ಆನೇಕಲ್ ಬಾಲರಾಜ್ ಅವರ ನಿರ್ಮಾಣ ಪಯಣವೂ ‘ಕರಿಯ’ ಚಿತ್ರದಿಂದ ಆರಂಭವಾಗಿತ್ತು. ‘ಜೋಗಿ’ ಪ್ರೇಮ್ ಅವರ ಚೊಚ್ಚಲ ನಿರ್ದೇಶನದ ಈ ಚಿತ್ರ ದರ್ಶನ್ ಮತ್ತು ಅಭಿನಯಶ್ರೀ ಮುಖ್ಯಭೂಮಿಕೆಯಲ್ಲಿದ್ದರು. ‘ಕರಿಯ’ ಚಿತ್ರವು ಆನೇಕಲ್ ಬಾಲರಾಜ್ ಅವರಿಗೆ ಅಪಾರ ಯಶಸ್ಸು ಮತ್ತು ಜನಪ್ರಿಯತೆಯನ್ನು ತಂದುಕೊಟ್ಟಿತು. ರಿಯಲ್ ರೌಡಿಗಳು ನಟಿಸಿದ್ದ ಮತ್ತು ಅಂಡರ್‌ವರ್ಲ್ಡ್ ಕಥಾವಸ್ತುವನ್ನು ಹೊಂದಿದ್ದ ಈ ಚಿತ್ರದ ಗುರುಕಿರಣ್ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಹಾಡುಗಳು ಕೂಡಾ ದೊಡ್ಡ ಹಿಟ್ ಆಗಿದ್ದವು.