ಬೆನ್ನು ನೋವಿಗೆ ರಜೆ ಕೇಳಿ 10 ನಿಮಿಷದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ 40ರ ಯುವಕ

ಬೆಂಗಳೂರು: ಯುವಜನರಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚುತ್ಲೇ ಇದೆ. 30-40 ವರ್ಷ ವಯಸ್ಸಿನ ಯುವಕರು ದಿಢೀರ್ ಹೃದಯಸ್ತಂಭನದಿಂದ (cardiac arrest) ನಿಧನ ಹೊಂದುತ್ತಿರುವುದು ಹೆಚ್ಚಾಗಿದೆ. ಬೆಂಗಳೂರಿನಲ್ಲಿ 40 ವರ್ಷದ ವ್ಯಕ್ತಿಯೊಬ್ಬರು ತಮ್ಮ ಮ್ಯಾನೇಜರ್ಗೆ ಬೆನ್ನು ನೋವಿದೆ ಎಂದು ಮೆಸೇಜ್ ಹಾಕಿ ಹತ್ತೇ ನಿಮಿಷಕ್ಕೆ ಹೃದಯಸ್ತಂಭನಗೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತ ವ್ಯಕ್ತಿಯ ತಂಡದ ಮ್ಯಾನೇಜರ್ ಈ ಘಟನೆಯನ್ನು ತಮ್ಮ ಎಕ್ಸ್ ಅಕೌಂಟ್ನಲ್ಲಿ ಹಂಚಿಕೊಂಡಿದ್ದಾರೆ. ಮೃತ ಉದ್ಯೋಗಿಯ ಹೆಸರು ಶಂಕರ್ ಎಂದೆನ್ನಲಾಗಿದೆ.
‘ಸರ್, ತುಂಬಾ ಬೆನ್ನು ನೋವಿದೆ. ಇವತ್ತು ಬರೋಕ್ಕಾಗಲ್ಲ. ದಯವಿಟ್ಟು ರಜೆ ಕೊಡಿ ಎಂದು ನನ್ನ ಸಹೋದ್ಯೋಗಿ ಶಂಕರ್ ಬೆಳಗ್ಗೆ 8:37ಕ್ಕೆ ನನಗೆ ಮೆಸೇಜ್ ಮಾಡಿದರು. ಇಂಥ ರಜೆ ಮನವಿಗಳು ಸಾಮಾನ್ಯವಾದ್ದರಿಂದ ರೆಸ್ಟ್ ತಗೊಳ್ಳಿ ಎಂದು ನಾನೂ ಸಹಜವಾಗಿ ಉತ್ತರಿಸಿದೆ…
‘ಬೆಳಗ್ಗೆ 11 ಗಂಟೆಗೆ ನನಗೆ ಆಘಾತ ಕೊಡುವಂಥ ಕರೆ ಬಂತು. ಶಂಕತ್ ನಿಧನರಾದರು ಎಂದು ಕರೆ ಮಾಡಿದವರು ತಿಳಿಸಿದರು. ಮೊದಲಿಗೆ ನಂಬಲಾಗಲಿಲ್ಲ. ಮನೆಯ ವಿಳಾಸ ಪಡೆದು ಹೋದೆವು. ಆತ ಬದುಕಿರಲಿಲ್ಲ’ ಎಂದು ಕೆ.ವಿ. ಅಯ್ಯರ್ ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಸಿಗರೇಟ್, ಹೆಂಡ ಮುಟ್ಟುತ್ತಿರಲಿಲ್ಲ…
ಶಂಕರ್ಗೆ 40 ವರ್ಷ ವಯಸ್ಸಾಗಿತ್ತು. ಬಹಳ ಆರೋಗ್ಯವಂತರಾಗಿದ್ದರು. ಫಿಟ್ನೆಸ್ ಕಾಯ್ದುಕೊಂಡಿದ್ದರು. ಸ್ಮೋಕಿಂಗ್ ಮಾಡುತ್ತಿರಲಿಲ್ಲ. ಹೆಂಡದಿಂದ ದೂರ ಇದ್ದರು. ಅವರಿಗೆ ಹೃದಯ ಸ್ತಂಭನ ಆಗಿರುವುದು ಅಚ್ಚರಿ ಎನಿಸಬಹುದು. ನಟ ಪುನೀತ್ ರಾಜಕುಮಾರ್ ಸೇರಿದಂತೆ ಸಾಕಷ್ಟು ಫಿಟ್ ಅಂಡ್ ಫೈನ್ ಯುವಜನರು ಈ ರೀತಿ ಕಾರ್ಡಿಯಾಕ್ ಅರೆಸ್ಟ್, ಹಾರ್ಟ್ ಅಟ್ಯಾಕ್ಗಳಿಂದ ಮೃತಪಡುತ್ತಿರುವುದು ಸರ್ವೇಸಾಮಾನ್ಯ ಎಂಬಂತಾಗಿದೆ.
‘ಚೆನ್ನಾಗಿ ಪ್ರಜ್ಞೆ ಇರುವ ವ್ಯಕ್ತಿ ಮೆಸೇಜ್ ಮಾಡಿ ಕೇವಲ ಹತ್ತೇ ನಿಮಿಷದಲ್ಲಿ ಕೊನೆಯುಸಿರು ಎಳೆಯುತ್ತಾರೆ ಎಂದರೆ ಶಾಕ್ ಎನಿಸುತ್ತದೆ. ಜೀವನ ಅದೆಷ್ಟು ಅನಿಶ್ಚಿತ. ನಿಮ್ಮ ಜೀವನದಲ್ಲಿ ಮುಂದಿನ ಕ್ಷಣ ಏನಾಗುತ್ತೆ ಎಂದು ನಿಮಗೆ ಗೊತ್ತೇ ಇರುವುದಿಲ್ಲ. ನಿಮ್ಮ ಸುತ್ತಲಿನ ಜನರ ಮೇಲೆ ದಯೆ ಇರಲಿ. ಜೀವನ ಇರುವವರೆಗೂ ಖುಷಿ ಖುಷಿಯಾಗಿರಿ’ ಎಂದು ಅಯ್ಯರ್ ಹೇಳಿಕೊಂಡಿದ್ದಾರೆ.