ʼನಮ್ ಬಾಸ್ ಬಗ್ಗೆ ಮಾತಾಡ್ತಿಯಾʼ – ಹಲ್ಲೆ ಯತ್ನದೊಳಗಾದ ನಟ ಪ್ರಥಮ್, ಎಸ್ಪಿ ಬಳಿ ಗಂಭೀರ ದೂರು

ಬೆಂಗಳೂರು: ನಟ ಪ್ರಥಮ್‌ಗೆ ಕಿಡಿಗೇಡಿಗಳಿಂದ ಜೀವ ಬೆದರಿಕೆ ಬಂದಿದೆ. ಸಿನಿ ಚಿತ್ರೀಕರಣವೊಂದಕ್ಕೆ ತೆರಳೋದಕ್ಕೂ ಮುನ್ನ ದೊಡ್ಡಬಳ್ಳಾಪುರ ದೇವಸ್ಥಾನಕ್ಕೆ ಹೋಗಿದ್ದ ವೇಳೆ ದುಷ್ಕರ್ಮಿಗಳ ಗುಂಪೊಂದು ಪ್ರಥಮ್‌ಗೆ ಜೀವ ಬೆದರಿಕೆ ಒಡ್ಡಿರುವುದಾಗಿ ತಿಳಿದುಬಂದಿದೆ.

ಈ ಕುರಿತು ವ್ಯಕ್ತಿಯೊಬ್ಬರೊಂದಿಗೆ ಪ್ರಥಮ್ ಮಾತನಾಡಿರುವ ಆಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದೊಡ್ಡಬಳ್ಳಾಪುರ ದೇವಸ್ಥಾನಕ್ಕೆ ಹೋಗಿದ್ದ ವೇಳೆ ದುಷ್ಕರ್ಮಿಗಳು ಡ್ಯಾಗ್ರರ್ ತೋರಿಸಿ ನಟನಿಗೆ ಜೀವಬೆದರಿಕೆ ಹಾಕಿದ್ದಾರೆ. ಪೂಜೆ ಮುಗಿಸಿ ಹೊರಟ ವೇಳೆ ಕಾರಿಗೆ ಅಡ್ಡಬಂದ ಕೆಲವರು ಪ್ರಥಮ್‌ನನ್ನ ಬಲವಂತವಾಗಿ ಕರೆದೊಯ್ದು, ನಮ್ ಬಾಸ್ ಬಗ್ಗೆ ಮಾತಾಡ್ತಿಯ ಅಂತ ಹಲ್ಲೆಗೆ ಯತ್ನಿಸಿ ಅವಾಚ್ಛವಾಗಿ ನಿಂದಿಸಿ ಬೆದರಿಸಿದ್ದಾರೆ. ಕೊನೆಗೆ ಅಲ್ಲಿಂದ ತಪ್ಪಿಸಿಕೊಂಡ ಬಂದ ಪ್ರಥಮ್ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿಕೆ ಬಾಬಾ ಅವರನ್ನ ಭೇಟಿಯಾಗಿ ಘಟನೆ ವಿವರಿಸಿದ್ದಾರೆ. ಬಳಿಕ ಎಸ್ಪಿ ಸಂಬಂಧಪಟ್ಟ ಠಾಣೆಗೆ ದೂರು ನೀಡುವಂತೆ ಸಲಹೆ ನೀಡಿದ್ದಾರೆ.
ಈವರೆಗೂ ದೂರು ಕೊಡದ ನಟ
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಎಸ್ಪಿ ಸಿಕೆ ಬಾಬಾ, ನಟ ಪ್ರಥಮ್ ಮೇಲೆ ಹಲ್ಲೆಗೆ ಯತ್ನಿಸಿ, ಜೀವ ಬೆದರಿಕೆ ಆರೋಪ ಕೇಳಿಬಂದಿದೆ. ದೇವಸ್ಥಾನಕ್ಕೆ ಹೋಗಿದ್ದಾಗ ಘಟನೆ ನಡೆದಿದೆ. ಅವರನ್ನ ಈಗಾಗಲೇ ಕರೆದು ಮಾತನಾಡಿದ್ದೀನಿ. ಅವರಿಗೆ ದೂರು ಕೊಡೋಕೆ ಹೇಳಿದ್ದೀನಿ. ಇಲ್ಲಿವರೆಗೂ ಯಾವುದೇ ದೂರು ನೀಡಿಲ್ಲ. ದೂರು ಕೊಟ್ಟ ನಂತರ ತನಿಖೆ ಮಾಡಿ ಕ್ರಮ ಕೈಗೊಳ್ತಿವಿ ಎಂದು ಹೇಳಿದ್ದಾರೆ.
