ಬೆಂಗಳೂರು ಆಟೋದಲ್ಲಿ ಮಹಿಳೆ ಶವ ಪತ್ತೆ: ಸ್ನೇಹಿತನ ಜತೆ ಸಲುಗೆಗೆ ಕೊಲೆ, ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ತಿಲಕ್ ನಗರದ (Tilak Nagar) ಆಟೋ ಒಂದರಲ್ಲಿ ಮಹಿಳೆ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸ್ನೇಹಿತನೊಂದಿಗೆ ಸಲುಗೆಯಿಂದ ಇರುವುದನ್ನು ಕಂಡು ಮಹಿಳೆಯನ್ನು ಮುದ್ದೆ ತಿರುಗಿಸುವ ಕೋಲಿನಿಂದ ಹತ್ಯೆ ಮಾಡಿ, ಬಳಿಕ ಅದೇ ಗೆಳೆಯನ ಜೊತೆ ಲವ್ವರ್ ಪರಾರಿಯಾಗಿದ್ದ ಎಂದು ತಿಳಿದುಬಂದಿದೆ.

ಮೃತ ಮಹಿಳೆಯನ್ನು ಸಲ್ಮಾ (35) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳನ್ನು ಸುಬ್ಬುಮಣಿ ಹಾಗೂ ಸೆಂಥಿಲ್ ಎನ್ನಲಾಗಿದೆ
ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ಮೃತ ಸಲ್ಮಾಗೆ ಮದುವೆಯಾಗಿ, ನಾಲ್ವರು ಮಕ್ಕಳಿದ್ದರು. ಗಂಡ ಮೃತಪಟ್ಟ ಬಳಿಕ ಆರೋಪಿ ಸುಬ್ಬುಮಣಿ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಆದರೆ ಸುಬ್ಬಮಣಿ ಗೆಳೆಯ ಸೆಂಥಿಲ್ ಮೃತ ಸಲ್ಮಾ ಜೊತೆಗೆ ಸಲುಗೆಯಿಂದಿದ್ದ. ಇದನ್ನು ಕಂಡ ಸುಬ್ಬಮಣಿ ಕೋಪಗೊಂಡು, ರಾಗಿಮುದ್ದೆ ತಿರುಗಿಸುವ ಕೋಲಿನಿಂದ ಹೊಡೆದು ಮಹಿಳೆಯನ್ನು ಕೊಲೆ ಮಾಡಿದ್ದಾನೆ. ಆದರೆ ಕೊಲೆಗೆ ಮುನ್ನ ಮೂವರು ಸೇರಿಕೊಂಡು ಕುಡಿದು ಮಜಾ ಮಾಡಿದ್ದರು ಎಂದು ತಿಳಿಸಿದ್ದಾರೆ.
ಸಲ್ಮಾ ಮೃತದೇಹವನ್ನು ಕೆಟ್ಟು ನಿಂತಿದ್ದ ಆಟೋ ಒಂದರಲ್ಲಿ ಹಾಕಿ, ಬಳಿಕ ಸೆಂಥಿಲ್ ಹಾಗೂ ಸುಬ್ಬುಮಣಿ ಸೇರಿಕೊಂಡು ನಡೆದುಕೊಂಡು ಮೆಜೆಸ್ಟಿಕ್‌ಗೆ ಹೋಗಿ ಅಲ್ಲಿಂದ ತುಮಕೂರಿಗೆ (Tumakuru) ಎಸ್ಕೇಪ್ ಆಗಿದ್ದರು. ಬಳಿಕ ಪಾಂಡಿಚೇರಿ ಹೋಗುವ ಪ್ಲ್ಯಾನ್ ಮಾಡಿಕೊಂಡಿದ್ದರು. ಪೊಲೀಸರು ಆರೋಪಿಗಳ ಪತ್ತೆಗಿಳಿದಾಗ ಮೊಬೈಲ್ ಲೊಕೇಶನ್ ತುಮಕೂರಿನಲ್ಲಿ ಪತ್ತೆಯಾಗಿತ್ತು. ಕೂಡಲೇ ಡಿಸಿಪಿ ಸಾರಾ ಫಾತಿಮಾ ತುಮಕೂರಿನ ಪೊಲೀಸರಿಗೆ ಕರೆ ಮಾಡಿ, ವಿಷಯ ತಿಳಿಸಿದ್ದರು.
ಇತ್ತ ತುಮಕೂರು ಪೊಲೀಸರು ಆರೋಪಿಗಳಿಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಮೃತ ಸಲ್ಮಾ ಉಗುರು ಹಾಗೂ ಬಟ್ಟೆಯಲ್ಲಿ ರಕ್ತ ಪತ್ತೆಯಾಗಿತ್ತು. ಇದನ್ನು ಪರಿಶೀಲನೆ ನಡೆಸಿದಾಗ ಇವರೇ ಆರೋಪಿಗಳು ಎನ್ನುವುದು ತಿಳಿದುಬಂದಿದೆ.
ಕೂಡಲೇ ತಿಲಕ ನಗರ ಪೊಲೀಸರು ತುಮಕೂರಿಗೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ.