ಮಾವನಿಗೆ ವಿದ್ಯುತ್ ಶಾಕ್ ನೀಡಿ ಕೊ*ಲೆ ಮಾಡಿ ಅರಶಿಣ ರೋಸ್ ವಾಟರ್ ಹಚ್ಚಿದ ಸೊಸೆ

ಛತ್ತೀಸ್ ಗಢ :ಸಾಮಾನ್ಯವಾಗಿ ಕೊಲೆ ಮಾಡಿದರೆ ಮೃತದೇಹವನ್ನು ಹೂತು ಹಾಕುವುದು, ಅಥವಾ ಕೊಲೆಯ ಬಗ್ಗೆ ಕಟ್ಟು ಕಥೆ ಕಟ್ಟುವುದನ್ನು ನೋಡಿರುತ್ತೇವೆ ಆದರೆ ಇಲ್ಲೊಬ್ಬ ಚಾಲಾಕಿ ಮಹಿಳೆ ತನ್ನ ಮಾವನನ್ನು ಕೊಂದಿದ್ದಲ್ಲದೆ ಅಪರಾಧವನ್ನು ಮರೆಮಾಚುವುದಕ್ಕೆ ಗಾಯಕ್ಕೆ ಅರಶಿನ ಪುಡಿ ಹಚ್ಚಿರುವ ಘಟನೆ ಛತ್ತೀಸ್ ಗಢದ ಬಲೋದ್ ನಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಮನೋಹರ್ ನಿರ್ಮಲ್ಕರ್ ಎಂದು ಗುರುತಿಸಲಾಗಿದೆ. ಪೊಲೀಸರ ವರದಿಯ ಪ್ರಕಾರ, ಆರೋಪಿಗಳಾದ ಸೊಸೆ ಗೀತಾ ನಿರ್ಮಲ್ಕರ್ ಹಾಗೂ ಆಕೆಯ ಪ್ರಿಯಕರ ಲೇಖ್ರಾಮ್ ನಿಶಾದ್ ಎಂಬಾತ ಮಾವ ಮನೋಹರ್ ಮಲಗಿದ್ದಾಗ ವಿದ್ಯುತ್ ಶಾಕ್ ನೀಡಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಎಲೆಕ್ಟ್ರಿಷಿಯನ್ ಹ್ಯಾಂಡ್ ಗ್ಲೋಸ್ ಬಳಸಿ ವಿದ್ಯುತ್ ತಂತಿಯಿಂದ ಸುತ್ತಿದ ಲೋಹದ ರಾಡ್ ಅನ್ನು ಮನೋಹರ್ ಗೆ ಮುಟ್ಟಿಸುವ ಮೂಲಕ ಕೊಲೆ ಮಾಡಿದ್ದಾರೆ ಬಳಿಕ ಕುಡಿದು ಸೈಕಲ್ ಓಡಿಸುವ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರಿಗೆ ಸುಳ್ಳು ಕಥೆ ಕಟ್ಟಿದ್ದಾರೆ.
ಮನೋಹರ್ ಹಾಗೂ ಗೀತಾ ನಡುವೆ ಆಗಾಗ ಗಲಾಟೆಯಾಗುತ್ತಲೇ ಇತ್ತು.. ಇದರಿಂದ ಸಿಟ್ಟಾದ ಆರೋಪಿ ಗೀತಾ ತನ್ನ ಪ್ರಿಯಕರನ ಜೊತೆ ಸೇರಿ ಮಾವನನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದಾಳೆ. ಮೃತ ಮನೋಹರ್ ಯಾವಾಗಲೂ ಕುಡಿದು ಮನೆಗೆ ಬರುತ್ತಿದ್ದ..
ಇದನ್ನು ಅರಿತ್ತಿದ್ದ ಸೊಸೆ ಗೀತಾ ತನ್ನ ಪ್ರಿಯಕರ ನ ಜೊತೆ ಸೇರಿ ಮಾವ ಮಲಗಿದ್ದಾಗ ಕರೆಂಟ್ ಶಾಕ್ ನೀಡಿ ಕೊಲೆ ಮಾಡಿದ್ದಾರೆ. ಮಾರನೇ ದಿನ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದಾಗ ಮನೋಹರ್ ಅವರ ಮೈ ಮೇಲೆ ಗಾಯಗಳಿರುವುದನ್ನು ಗಮನಿಸಿ ಅನುಮಾನಗೊಂಡು ದೋಂಡಿ ಲೋಹರಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ ಎಂದು ದೃಢವಾಗಿದೆ. ತನಿಖೆಯ ವೇಳೆ ಪೊಲೀಸರು ಕುಟುಂಬ ಮತ್ತು ಗ್ರಾಮಸ್ಥರನ್ನು ವಿಚಾರಿಸಿದಾಗ ಸೊಸೆ ಹಾಗೂ ಮನೋಹರ್ ನಡುವೆ ಆಗಾಗ ಗಲಾಟೆಯಾಗುತ್ತಲೇ ಇತ್ತು ಎಂದು ಗೊತ್ತಾಗಿದೆ.
ಈ ವೇಳೆ ಸೊಸೆ ಗೀತಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮನೋಹರ್ ದಿನನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ.. ಅಲ್ಲದೇ ನನ್ನನ್ನು ನಿಂದಿಸುತ್ತಿದ್ದ ಇದರಿಂದ ಬೇಸತ್ತು ಪ್ರಿಯಕರನ ಜೊತೆ ಸೇರಿ ವಿದ್ಯುತ್ ಶಾಕ್ ನೀಡಿ ಕೊಲೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾಳೆ.
ಅಷ್ಟೇ ಅಲ್ಲದೆ, ಕೊಲೆಯ ಬಗ್ಗೆ ಯಾರೊಬ್ಬರಿಗೂ ಅನುಮಾನ ಬರಬಾರದು ಎಂದು ಗಾಯಗಳನ್ನು ಮರೆಮಾಡಲು ಅವರು ಅರಿಶಿನ ಮತ್ತು ರೋಸ್ ವಾಟರ್ ಅನ್ನು ಗಾಯಗಳಿಗೆ ಹಚ್ಚಿರುವುದಾಗಿ ಹೇಳಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೋಂಡಿ ಲೋಹರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
