ಫುಟ್‌ಪಾತ್‌ನಲ್ಲಿ ಮಲಗಿದ್ದ ಮಗುವನ್ನು ಅಪಹರಿಸಿದ ಮಹಿಳೆ

ಬೆಂಗಳೂರು: ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಹೊರಗಿನ ಫುಟ್‍ಪಾತ್‍ನಲ್ಲಿ ತನ್ನ ತಂದೆಯೊಂದಿಗೆ ಮಲಗಿದ್ದ ಮಗುವನ್ನು ಅಪಹರಿಸಿದ ಆರೋಪದಡಿ ಆರೋಪದಡಿ ಇಲ್ಲಿನ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜಸ್ಥಾನ ಮೂಲದ ರೋಹಿತ್ (1 ವರ್ಷ) ಎಂಬ ಮಗು ಅಪಹರಣಕ್ಕೊಳಪಟ್ಟಿರುವುದಾಗಿ ಗುರುತಿಸಲಾಗಿದೆ.

ರೋಹಿತ್‍ನ ತಂದೆ ಮುಖೇಶ್ ಎಂಬವರು ತನ್ನ ಪತ್ನಿ ಮತ್ತು ನಾಲ್ಕು ವರ್ಷದ ಮಗಳೊಂದಿಗೆ ಬೆಂಗಳೂರು ನಗರಕ್ಕೆ ಬಂದಿದ್ದರು. ಈ ಕುಟುಂಬವು ಶಿವಾಜಿನಗರ ಬಸ್ ನಿಲ್ದಾಣ ಮತ್ತು ಸುತ್ತಮುತ್ತ ಬಲೂನ್‍ಗಳನ್ನು ಮಾರಾಟ ಮಾಡಿ ಫುಟ್‍ಪಾತ್‍ಗಳಲ್ಲಿ ಜೀವಿಸುತ್ತಿತ್ತು ಎಂದು ತಿಳಿದುಬಂದಿದೆ.
ಮೇ 15ರ ಗುರುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಮುಖೇಶ್ ಎಚ್ಚರವಾದಾಗ, ತನ್ನ ಮಗ ರೋಹಿತ್ ಕಾಣೆಯಾಗಿದ್ದಾನೆಂದು ತಿಳಿದು ಗಾಬರಿಗೊಂಡಿದ್ದಾರೆ. ಎಲ್ಲ ಕಡೆ ಹುಡುಕಿದರೂ ಮಗು ಪತ್ತೆಯಾಗಿಲ್ಲ. ಬಳಿಕ ಮುಖೇಶ್ ಅವರು ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಪ್ರಕರಣ ಸಂಬಂಧ ಆಸ್ಪತ್ರೆಯ ಒಳಗೆ ಮತ್ತು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ನಂತರ, ಮಹಿಳೆಯೊಬ್ಬರು ಮಗುವನ್ನು ಎತ್ತಿಕೊಂಡು ಸ್ಥಳದಿಂದ ಪರಾರಿಯಾಗುತ್ತಿರುವುದು ಕಂಡುಬಂದಿದೆ. ಆಕೆಯ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿವೆ ಎಂದು ಪೊಲೀಸರು ವಿವರಿಸಿದ್ದಾರೆ.
