ಡ್ರಾಪಿಂಗ್ ಪಾಯಿಂಟ್ನಲ್ಲಿ ಇಳಿಯಲು ಜಗಳಕ್ಕಿಳಿದ ಮಹಿಳೆ

ಇತ್ತೀಚೆಗಿನ ದಿನಗಳಲ್ಲಿ ಕ್ಯಾಬ್ ಬುಕ್ ಮಾಡಲು ರೈಡ್ ಹೇಲಿಂಗ್ ಅಪ್ಲಿಕೇಶನ್ (Ride hailing app) ಬಳಸುವವರೇ ಹೆಚ್ಚು. ಇಲ್ಲಿ ನೀವು ಯಾವ ಸ್ಥಳದಲ್ಲಿದ್ದೀರಿ ಹಾಗೂ ಯಾವ ಸ್ಥಳ ತಲುಪಬೇಕು ಎನ್ನುವುದು ಉಲ್ಲೇಖಿಸಬೇಕಾಗುತ್ತದೆ. ಕ್ಯಾಬ್ ಡ್ರೈವರ್ ಇಲ್ಲಿ ಉಲ್ಲೇಖಿಸಿದ ಸ್ಥಳಕ್ಕೆ ಪ್ರಯಾಣಿಕರನ್ನು ತಲುಪಿಸುತ್ತಾರೆ. ಆದರೆ ಇದೀಗ ಇದೇ ವಿಚಾರಕ್ಕೆ ಕ್ಯಾಬ್ ಡ್ರೈವರ್ (Cab Driver) ಹಾಗೂ ಮಹಿಳೆಯ ನಡುವೆ ವಾಗ್ವಾದ ನಡೆದಿದೆ. ಈ ಅಪ್ಲಿಕೇಶನ್ನಲ್ಲಿ ನಿರ್ದಿಷ್ಟ ಪಡಿಸಿದ ಸ್ಥಳವನ್ನು ಮೀರಿ ಮುಂದೆ ಹೋಗಲು ನಿರಾಕರಿಸಿದ್ದು, ಹಣ ಪಾವತಿ ಮಾಡುವುದಿಲ್ಲ ಎಂದು ಮಹಿಳೆಯ ಬೆದರಿಕೆ ಹಾಕಿರುವ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಡ್ಯಾಶ್ ಕ್ಯಾಮ್ ನಲ್ಲಿ ಸೆರೆ ಹಿಡಿಯಲಾದ ವಾಗ್ವಾದದ ದೃಶ್ಯ ನೋಡಿದ ಈ ನೆಟ್ಟಿಗರು ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕ್ಯಾಬ್ ಡ್ರೈವರ್ಗೆ ಬೆದರಿಕೆ ಹಾಕಿದ ಮಹಿಳೆ, ಅಷ್ಟಕ್ಕೂ ಆಗಿದ್ದೇನು?
ಶೋನೇಕಪೂರ್ (ShoneeKapoor) ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ರೈಡ್ ಹೇಲಿಂಗ್ ಅಪ್ಲಿಕೇಶನ್ ನಿರ್ದಿಷ್ಟಪಡಿಸಿದ ಡ್ರಾಪ್-ಆಫ್ ಪಾಯಿಂಟ್ ಮೀರಿ ಹೋಗಲು ಕ್ಯಾಬ್ ಚಾಲಕನು ನಿರಾಕರಿಸಿದ್ದು, ಈ ಮಹಿಳೆಯು ತಾನು ಹಣ ಪಾವತಿಸುವುದಿಲ್ಲ ಎಂದು ಬೆದರಿಕೆ ಹಾಕಿದ್ದಾಳೆ. ನೀವು ಪಾವತಿಸದೇ ಹೋಗುವಿರಾದರೆ, ಈಗಲೇ ಹೊರಡಿ ಎಂದು ಡ್ರೈವರ್ ಹೇಳುವುದನ್ನು ನೋಡಬಹುದು.
ಈ ವೇಳೆಯಲ್ಲಿ ಮಹಿಳೆ ತಾನು ಕಾರಿನೊಳಗೆ ಕುಳಿತುಕೊಳ್ಳಬಾರದೆ ಎಂದು ಪ್ರಶ್ನಿಸಿದ್ದು, ಮತ್ತೆ ಚಾಲನೆ ಮಾಡುವಂತೆ ಒತ್ತಡ ಹಾಕುವುದನ್ನು ನೀವಿಲ್ಲಿ ಕಾಣಬಹುದು. ಆದರೆ ಚಾಲಕನು ಇದು ಡ್ರಾಪ್-ಆಫ್ ಪಾಯಿಂಟ್, ನಾನು ನಿಮ್ಮನ್ನು ಏಕೆ ಒಳಗೆ ಬಿಡಬೇಕು ಎಂದು ಪ್ರಶ್ನೆ ಮಾಡಿದ್ದಾನೆ. ನೀವು ರೆಡಿ ಇದ್ರೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಬಹುದು, ಆದರೆ ನಾನು ನಿಗದಿತ ಸ್ಥಳದಿಂದ ದೂರಕ್ಕೆ ಡ್ರೈವ್ ಮಾಡುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾನೆ.
ಈ ವೇಳೆಯಲ್ಲಿ ತಾನು ಹಣ ಪಾವತಿ ಮಾಡುವುದಿಲ್ಲ ಎಂದು ಮಹಿಳೆ ನೇರವಾಗಿ ಹೇಳಿದ್ದಕ್ಕೆ, ನೀವು ಹಣ ಪಾವತಿಸದಿದ್ದರೆ ನನಗೆ ಏನು ಸಮಸ್ಯೆ ಇಲ್ಲ. 132 ರೂ ನನ್ನನ್ನು ಶ್ರೀಮಂತನನ್ನಾಗಿ ಮಾಡುವುದಿಲ್ಲ, ಹಾಗೆಯೇ ನಿಮ್ಮನ್ನೂ ಶ್ರೀಮಂತರನ್ನಾಗಿ ಮಾಡುವುದಿಲ್ಲ ಎಂದು ಹೇಳಿದ್ದಾನೆ. ಹೀಗೆನ್ನುತ್ತಿದ್ದಂತೆ ಮಹಿಳೆಯೂ ಯಾವ ಸಂದರ್ಭಗಳಲ್ಲಿ ನಾನು ನಿಮ್ಮ ಕ್ಯಾಬ್ ಅನ್ನು ಬುಕ್ ಮಾಡಿದ್ದೇನೆ ಎಂದು ತಿಳಿದಿಲ್ಲ ಎಂದು ವ್ಯಂಗ್ಯವಾಗಿ ಹೇಳುತ್ತಾನೆ.
ಈ ಮಾತು ಕೇಳುತ್ತಿದ್ದಂತೆ ಚಾಲಕನ ಪಿತ್ತ ನೆತ್ತಿಗೇರುತ್ತದೆ, ಕೋಪದಲ್ಲೇ ಚಾಲಕನು ನಾನು ನಿಮ್ಮ ಹಣವನ್ನು ತಿನ್ನುತ್ತಿಲ್ಲ. ಮಾತಿನಲ್ಲಿ ಹಿಡಿತವಿರಲಿ ನೀವು ಯಾಕೆ ಹೀಗೆ ಮಾತಾಡುತ್ತೀರಿ?. ಇಲ್ಲಿಯವರೆಗೆ ನಿಮ್ಮನ್ನು ಕರೆತಂದಿದ್ದರೂ ನೀವು ನನ್ನ ಹಣವನ್ನು ಪಾವತಿ ಮಾಡುತ್ತಿಲ್ಲ, ಇದೆಷ್ಟು ಸರಿ ಎಂದು ಪ್ರಶ್ನೆ ಮಾಡಿರುವುದನ್ನು ಕಾಣಬಹುದು.