ನಕಲಿ ಬಿಲ್ ಪಾಸ್ ಒತ್ತಡಕ್ಕೆ ಸಿಲುಕಿ ಮಹಿಳಾ ಇಂಜಿನಿಯರ್ ಆತ್ಮಹತ್ಯೆ; ಡೆತ್ ನೋಟ್ ಆಧರಿಸಿ ಇಬ್ಬರು ಅಧಿಕಾರಿಗಳ ಬಂಧನ!

ಸರ್ಕಾರಿ ಇಂಜಿನಿಯರ್ ಒಬ್ಬರ ಮೃತದೇಹ ಅವರ ಬಾಡಿಗೆ ಮನೆಯಲ್ಲಿ ಪತ್ತೆಯಾಗಿದ್ದು, ಡೆತ್ನೋಟ್ ಸಿಕ್ಕಿರುವ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಮೃತರನ್ನು ಜ್ಯೋತಿಷಾ ದಾಸ್ (30) ಎಂದು ಗುರುತಿಸಲಾಗಿದೆ. ಇವರು ಅಸ್ಸಾಂನಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ (ಪಿಡಬ್ಲ್ಯೂಡಿ) ಸಹಾಯಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಮಂಗಳವಾರ (ಜುಲೈ 22) ಮಧ್ಯಾಹ್ನ ತಮ್ಮ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ನಕಲಿ ಬಿಲ್‌ಗಳನ್ನು ಪಾಸ್ ಮಾಡಲು ಹಿರಿಯ ಅಧಿಕಾರಿಗಳು ತೀವ್ರ ಒತ್ತಡ ಹೇರಿದ್ದರಿಂದ ಸಾವಿಗೆ ಶರಣಾಗಿರುವುದಾಗಿ ಜ್ಯೋತಿಷಾ ಬರೆದಿದ್ದಾರೆ ಎನ್ನಲಾದ ಕೈಬರಹದ ಡೆತ್ನೋಟ್ ಪೊಲೀಸರಿಗೆ ಆಕೆಯ ಮನೆಯಲ್ಲಿ ಪತ್ತೆಯಾಗಿದೆ. ಅದರಲ್ಲಿ ತನ್ನ ಇಬ್ಬರು ಹಿರಿಯ ಅಧಿಕಾರಿಗಳ ಹೆಸರನ್ನು ಜ್ಯೋತಿಷಾ ಉಲ್ಲೇಖಿಸಿದ್ದಾರೆ.
ಅಪೂರ್ಣಗೊಂಡ ಕೆಲಸದ ಬಿಲ್‌ಗಳನ್ನು ಪಾಸ್ ಮಾಡುವಂತೆ ಇಬ್ಬರು ಹಿರಿಯ ಅಧಿಕಾರಿಗಳು ನಿರಂತರ ಒತ್ತಡ ಹೇರಿದರು. ಇದರಿಂದಾಗಿ ನಾನು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೆ. ನನ್ನ ಕೆಲಸದ ಒತ್ತಡದಿಂದಾಗಿ ನಾನು ಈ ಹೆಜ್ಜೆ ಇಡುತ್ತಿದ್ದೇನೆ. ಕಚೇರಿಯಲ್ಲಿ ನನಗೆ ಮಾರ್ಗದರ್ಶನ ನೀಡಲು ಯಾರೂ ಇಲ್ಲ. ನಾನು ದಣಿದಿದ್ದೇನೆ. ನನ್ನ ಹೆತ್ತವರು ನನಗಾಗಿ ಚಿಂತಿತರಾಗಿದ್ದಾರೆ ಎಂದು ಡೆತ್ನೋಟ್ನಲ್ಲಿ ಇಂಜಿನಿಯರ್ ಆರೋಪಿಸಿದ್ದಾರೆ.
ಜ್ಯೋತಿಷಾ ಅವರ ಕುಟುಂಬವು ಪೊಲೀಸ್ ದೂರು ದಾಖಲಿಸಿದ್ದು, ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾಗಿದೆ. ಡೆತ್ನೋಟ್ ಆಧಾರದ ಮೇಲೆ, ಇತ್ತೀಚೆಗೆ ಬಡ್ತಿ ಪಡೆದ ಸೂಪರಿಂಟೆಂಡೆಂಟ್ ಇಂಜಿನಿಯರ್ ಹಾಗೂ ಈ ಹಿಂದೆ ಬೊಂಗೈಗಾಂವ್‌ನಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದ ದಿನೇಶ್ ಮೇಧಿ ಶರ್ಮಾ ಮತ್ತು ಪ್ರಸ್ತುತ ಬೊಂಗೈಗಾಂವ್‌ನಲ್ಲಿ ನಿಯೋಜನೆಗೊಂಡಿರುವ ಉಪ-ವಿಭಾಗೀಯ ಅಧಿಕಾರಿ (ಎಸ್‌ಡಿಒ) ಅಮೀನುಲ್ ಇಸ್ಲಾಂ ಅವರನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕೂಡ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದು, ವಿವರವಾದ ತನಿಖೆಗೆ ಕರೆ ನೀಡಿದ್ದಾರೆ.