ವರದಕ್ಷಿಣೆ ಮತ್ತು ಲೈಂಗಿಕ ಕಿರುಕುಳಕ್ಕೆ ಬೇಸತ್ತು ಮಹಿಳೆಯ ಆತ್ಮಹತ್ಯೆ: ಮೃತ ರಂಜಿತಾ ವಿಡಿಯೋ ಹೇಳಿಕೆ ದಾಖಲು!

ಚೆನ್ನೈ: ಕೌಟುಂಬಿಕ ಕಿರುಕುಳ ಮತ್ತು ಲೈಂಗಿಕ ಕಿರುಕುಳದಿಂದ ಬೇಸತ್ತ ಮಹಿಳೆಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ.

ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ 32 ವರ್ಷದ ಮಹಿಳೆ ರಂಜಿತಾ ಎಂಬ ಮಹಿಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಶೇ.70ರಷ್ಟು ಸುಟ್ಟಗಾಯಗಳೊಂದಿಗೆ ಮಧುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಗೆ ರಂಜಿತಾ ಅವರನ್ನು ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ರಂಜಿತಾ ಸಾವನ್ನಪ್ಪಿದ್ದಾರೆ.
ಅತ್ತೆಯಿಂದ ವರದಕ್ಷಿಣೆ ಕಿರುಕುಳ, ಮಾವನಿಂದ ಲೈಂಗಿಕ ಕಿರುಕುಳ
ರಂಜಿತಾ 13 ವರ್ಷಗಳ ಹಿಂದೆ ವಿವಾಹವಾಗಿದ್ದು, ಅವರಿಗೆ 7 ತರಗತಿ ಓದುತ್ತಿದ್ದ ಮಗ ಕೂಡ ಇದ್ದಾನೆ. ಮದುವೆಯಾದ ದಿನದಿಂದಲೂ ರಂಜಿತಾ ಅವರ ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದು ಸಾಲದು ಎಂಬಂತೆ 32 ವರ್ಷದ ರಂಜಿತಾಗೆ ಅವರ ಮಾವ (ಗಂಡನ ತಂದೆ) ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
ರಂಜಿತಾ ಆಸ್ಪತ್ರೆಯಲ್ಲಿದ್ದಾಗ ಪೊಲೀಸರು ರಂಜಿತಾ ಅವರ ವಿಡಿಯೋ ಹೇಳಿಕೆ ದಾಖಲಿಸಿಕೊಂಡಿದ್ದು, ಈ ವೇಳೆ ರಂಜಿತಾ, “ನನ್ನ ಮಾವ ನನ್ನನ್ನು ತಬ್ಬಿಕೊಂಡರು. ನನಗೆ ಅದನ್ನು ಸಹಿಸಲಾಗಲಿಲ್ಲ. ಅದಕ್ಕಾಗಿಯೇ ನಾನು ಬೆಂಕಿ ಹಚ್ಚಿಕೊಂಡೆ” ಎಂದು ಹೇಳಿದ್ದಾರೆ ಎನ್ನಲಾಗಿದೆ. ಮಾತ್ರವಲ್ಲದೇ ರಂಜಿತಾ ಅವರ ಪುತ್ರ ಕೂಡ ತನ್ನ ತಾತ ಅಮ್ಮನ ಜೊತೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ ಎಂದು ಹೇಳಿಕೆ ನೀಡಿದ್ದಾರೆ. ಈ ಕುರಿತು ತಾಯಿ ರಂಜಿತಾ ಪುತ್ರನ ಜೊತೆ ಹೇಳಿಕೊಂಡು ಅತ್ತಿದ್ದರು ಎಂದು ಪುತ್ರ ಹೇಳಿಕೆ ನೀಡಿದ್ದಾನೆ.
ಪತಿ ಕುಟುಂಬಸ್ಥರಿಂದ ವರದಕ್ಷಿಣೆಗಾಗಿ ಕಿರುಕುಳ
ರಂಜಿತಾಗೆ ಕೇವಲ ಅತ್ತೆ ಮಾವ ಮಾತ್ರವಲ್ಲ.. ಪತಿಯೂ ಕೂಡ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. 13 ವರ್ಷಗಳ ಕಾಲ ಚಿತ್ರಹಿಂಸೆ ನೀಡಲಾಗಿದೆ. ಅವರು ಭೂಮಿ ಮತ್ತು ಹೆಚ್ಚಿನ ಚಿನ್ನವನ್ನು ಕೇಳುತ್ತಲೇ ಇದ್ದರು. ಅವರ ಮಾವ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ರಂಜಿತಾ ಸಾಕಷ್ಟು ಬಾರಿ ಹೇಳಿಕೊಂಡಿದ್ದಾಳೆ. ಪತಿ ಮದ್ಯಪಾನ ಮಾಡುತ್ತಿದ್ದರು, ಹೊಡೆಯುತ್ತಿದ್ದರು ಮತ್ತು ಎಲ್ಲವನ್ನೂ ಮೌನವಾಗಿ ಸಹಿಸಿಕೊಳ್ಳುವಂತೆ ನಾವು ಸಲಹೆ ನೀಡುತ್ತಿದ್ದೆವು. ಗಂಡನ ಕಡೆಯವರು ನಮ್ಮನ್ನು ಭೇಟಿ ಮಾಡಲು ಬಿಡುತ್ತಿರಲಿಲ್ಲ ಎಂದು ರಂಜಿತಾ ಕುಟುಂಬಸ್ಥರು ಹೇಳಿದ್ದಾರೆ.
ಇನ್ನು ಸ್ಥಳೀಯ ಪೊಲೀಸರು ಆತ್ಮಹತ್ಯೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ರಂಜಿತಾ ಆರೋಪಗಳ ತನಿಖೆ ನಡೆಸುತ್ತಿದ್ದಾರೆ. ಮೃತ ರಂಜಿತಾ ಅವರು ತಮ್ಮ ಮಾವನಿಂದ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ. ನಾವು ಆ ಕೋನದಲ್ಲಿ ತನಿಖೆ ನಡೆಸುತ್ತಿದ್ದೇವೆ ಎಂದರು. ಅಂತೆಯೇ ವರದಕ್ಷಿಣೆ ಕಿರುಕುಳದ ಕುರಿತು ಕೇಳಿದಾಗ, ಅವರು 13 ವರ್ಷಗಳ ಹಿಂದೆ ವಿವಾಹವಾದರು. ಆದ್ದರಿಂದ ಇದು ತಾಂತ್ರಿಕವಾಗಿ ವರದಕ್ಷಿಣೆ ನಿಷೇಧ ಕಾಯ್ದೆಯ ಅಡಿಯಲ್ಲಿ ಬರದಿರಬಹುದು, ಆದರೆ ನಾವು ಎಲ್ಲಾ ಅಂಶಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಅಧಿಕಾರಿ ಹೇಳಿದ್ದಾರೆ.
