ಕಳ್ಳತನ ಆರೋಪದಡಿ ವಿಚಾರಣೆಗೆ ಕರೆತಂದು ಮಹಿಳೆಗೆ ಮನಸೋಇಚ್ಛೆ ಥಳಿತ: ವರ್ತೂರು ಪೊಲೀಸರ ವಿರುದ್ಧ ಗಂಭೀರ ಆರೋಪ.

ಬೆಂಗಳೂರು: ಖಾಸಗಿ ಅಂಗಕ್ಕೆ ಹಲ್ಲೆ ಪರಿಣಾಮ ಮಲ, ಮೂತ್ರ ವಿಸರ್ಜಿಸಲು ಆಗದೆ ಮಹಿಳೆ (woman) ನರಕಯಾತನೆ ಅನುಭವಿಸುವಂತಾಗಿದ್ದು, ಬೆಂಗಳೂರಿನ ವರ್ತೂರು ಪೊಲೀಸರ (police) ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. 34 ವರ್ಷದ ಸುಂದರಿ ಬಿಬಿ ಹಲ್ಲೆಗೊಳಗಾದ ಮಹಿಳೆ. ಬೌರಿಂಗ್ ಆಸ್ಪತ್ರೆಯ ಎಂಎಲ್ಸಿ ರಿಪೋರ್ಟ್ನಲ್ಲಿ ಗಾಯದ ಭೀಕರತೆ ಬಗ್ಗೆ ಉಲ್ಲೇಖಿಸಲಾಗಿದೆ. ಸದ್ಯ ವೈದ್ಯರ ಚಿಕಿತ್ಸೆ ನಂತರ ಮಹಿಳೆ ಚೇತರಿಸಿಕೊಳ್ಳುತ್ತಿದ್ದಾರೆ.

ನಡೆದದ್ದೇನು?
ಸುಂದರಿ ಬಿಬಿ ನಗರದ ಖಾಸಗಿ ಅಪಾರ್ಟ್ಮೆಂಟ್ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಅವರು ಕೆಲಸ ಮಾಡುತ್ತಿದ್ದ ಫ್ಲ್ಯಾಟ್ನಲ್ಲಿ ಅವರ ವಿರುದ್ದ ಕಳ್ಳತನ ಆರೋಪ ಕೇಳಿಬಂದಿತ್ತು. ಅಷ್ಟೇ ಅಲ್ಲದೆ ವರ್ತೂರು ಪೊಲೀಸರಿಗೆ ಮಹಿಳೆ ವಿರುದ್ಧ ದೂರು ಕೂಡ ನೀಡಲಾಗಿದೆ. ಹೀಗಾಗಿ ವಿಚಾರಣೆಗೆಂದು ಮಹಿಳೆ ಕರೆತಂದು ಪೊಲೀಸರು ಖಾಸಗಿ ಅಂಗ, ಕೈಕಾಲು ಮತ್ತು ತಲೆಗೆ ಮನಸೋಇಚ್ಛೆ ಹಲ್ಲೆ ಮಾಡಿರುವುದಾಗಿ ಆರೋಪ ಕೇಳಿಬಂದಿದೆ.
ಕಾರಟಗಿ ಪೊಲೀಸರು ಬೀದಿ ಬದಿ ವ್ಯಾಪಾರಿ ಮೇಲೆ ಕ್ರೌರ್ಯ
ಕೊಪ್ಪಳ ಜಿಲ್ಲೆಯ ಕಾರಟಗಿ ಪೊಲೀಸರು ಬೀದಿ ಬದಿ ವ್ಯಾಪಾರಿ ಮೇಲೆ ಕ್ರೌರ್ಯ ಮೆರೆದಿದ್ದ ಆರೋಪ ಇತ್ತೀಚೆಗೆ ಕೇಳಿಬಂದಿತ್ತು. ದುರ್ಗೇಶ್ ಮೂಲತಃ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗುನ್ನಾಳ ನಿವಾಸಿ. ಇದೇ ದುರ್ಗೇಶ್ ಕಾರಟಗಿ ಪೊಲೀಸ್ ಠಾಣೆಯ ಸಿಬ್ಬಂದಿಗಳ ಮೇಲೆ ಗಂಭೀರ ಆರೋಪ ಮಾಡಿದ್ದರು. ಕುರಿ ಕಳ್ಳತನ ಕೇಸ್ನಲ್ಲಿ ದುರ್ಗೇಶ್ನನ್ನ ವಶಕ್ಕೆ ಪಡೆದು ಮನಸೋಇಚ್ಛೆ ಥಳಿಸಿದ್ದಾರೆಂಬ ಆರೋಪ ಕೇಳಿ ಬಂದಿತ್ತು.
ಕಾರಟಗಿ ಪೊಲೀಸ್ ಠಾಣೆಯ ಸಿಬ್ಬಂದಿ ಗಂಗಾಧರ, ಆನಂದ್ ಹಾಗೂ ಇನ್ನು ಕೆಲವರು ಸೇರಿ ಮೂರು ದಿನ ಕೂಡಿಟ್ಟು ಹಲ್ಲೆ ಮಾಡಿದ್ದಾರಂತೆ. ಅಲ್ಲದೆ ದುರ್ಗೇಶ್ ಬಳಿ ಸುಮಾರು 40 ಸಾವಿರ ರೂ. ಹಣ ವಸೂಲಿ ಮಾಡಿದ್ದರಂತೆ. ಎರಡು ತಿಂಗಳ ಬಳಿಕ ದುರ್ಗೇಶ್ ಪೊಲೀಸರ ಕ್ರೌರ್ಯವನ್ನ ಬಿಚ್ಚಿಟ್ಟಿದ್ದರು.
ಹಲ್ಲೆ ಮಾಡಿರುವ ವಿಷಯ ಯಾರಿಗೂ ಹೇಳದಂತೆ ಪೊಲೀಸರು ಧಮ್ಕಿ ಹಾಕಿದ್ದರಂತೆ. ಹೀಗಾಗಿ ಇಷ್ಟು ದಿನ ದುರ್ಗೇಶ್ ಸುಮ್ಮನಿದ್ದ. ಇದೀಗ ಪೊಲೀಸರ ವಿರುದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಕೊಡಲು ನಿರ್ಧರಿಸಿದ್ದರು. ಅಲ್ಲದೆ ಪೊಲೀಸರ ಕಿರುಕುಳದಿಂದ ರೋಸಿಹೋಗಿದ್ದ ದುರ್ಗೇಶ್ ಆತ್ಮಹತ್ಯೆಗೂ ಮುಂದಾಗಿದ್ದರು ಎಂಬ ಶಾಕಿಂಗ್ ಮಾಹಿತಿಯನ್ನೂ ಅವರೇ ಬಾಯಿ ಬಿಟ್ಟಿದ್ದರು.