ಹೆಣ್ಣು ಮಗು ಹೆತ್ತದ್ದಕ್ಕೆ ಬಾಣಂತಿಗೆ ಸ್ಕ್ರೂ ಡ್ರೈವರ್ ನಿಂದ ಹಲ್ಲೆ

ಉತ್ತರಾಖಂಡ್ :ನಮ್ಮ ಭಾರತದಲ್ಲಿ ಅನೇಕರು ಹೆಣ್ಣು ದೇವತೆಯನ್ನು ಪೂಜಿಸುತ್ತಾರೆ. ಹೆಣ್ಣು ದೇವರಾಗಿ, ತಾಯಾಗಿ ಸೊಸೆಯಾಗಿ, ಹೆಂಡತಿಯಾಗಿ ಬೇಕು. ಆದರೆ ಮಗಳಾಗಿ ಜನಿಸಿದರೆ ಮಾತ್ರ ಬೇಡವೇ ಬೇಡ ಇಂತಹ ವಿತಂಡ ಮನಸ್ಥಿತಿ ನಮ್ಮ ಅನೇಕ ಭಾರತೀಯರದ್ದು, ಜನರ ಇಂತಹ ಮನಸ್ಥಿತಿಗೆ ಮತ್ತೊಂದು ಉದಾಹರಣೆ ಉತ್ತರಾಖಂಡ್‌ನಲ್ಲಿ ನಡೆದ ಈ ಮನಕಲುಕುವ ಘಟನೆ.

ಪತ್ನಿ ಹೆಣ್ಣು ಮಗು ಹೆತ್ತಳೆಂದು ಆಕೆಯ ಗಂಡ ಆಕೆಯ ಮೇಲೆ ಸ್ಕ್ರೂ ಡ್ರೈವರ್‌ನಿಂದ ಹಲ್ಲೆ ಮಾಡಿದಂತಹ ಆಘಾತಕಾರಿ ಘಟನೆ ಇಲ್ಲಿ ನಡೆದಿದೆ. ಹಲ್ಲೆಯಿಂದ ಗಂಭೀರ ಗಾಯಗೊಂಡ ಬಾಣಂತಿ ಹಾಗೂ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು,ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರಾಖಂಡ್‌ನ ಕಾಶೀಪುರದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಪತಿ ಸ್ಕ್ರೂ ಡ್ರೈವರ್‌ನಿಂದ ಮಾಡಿದ ಹಲ್ಲೆಯಿಂದ ಆಕೆಯ ತಲೆ ಕಿವಿಗಳಿಗೆ ಗಾಯಗಳಾಗಿವೆ.
ಹರ್ಜಿಂದೆರ್ ಕೌರ್ ಗಂಡನಿಂದ ಹಲ್ಲೆಗೊಳಗಾದ ಮಹಿಳೆ. ಹಲ್ಲೆ ಮಾಡಿದ್ದಲ್ಲದೇ ತನ್ನ ಗಂಡನ ಮನೆಯವರು 5 ಲಕ್ಷ ರೂಪಾಯಿ ನಗದು ಹಾಗೂ ಚಿನ್ನ ವರದಕ್ಷಿಣೆಯಾಗಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಇದಾದ ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ಅವರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹರ್ಜಿಂದರ್ ಕೌರ್ ಆರೋಪಿಸಿದ್ದಾರೆ.
ವೈರಲ್ ಆದ ವೀಡಿಯೋದಲ್ಲಿ ಹರ್ಜಿಂದೆರ್ ಕೌರ್ ಗಂಡ ಆಕೆಯ ತಲೆಕೂದಲನ್ನು ಹಿಡಿದೆಳೆದು ನೆಲದ ಮೇಲೆ ಬೀಳಿಸಿ ಹಲ್ಲೆ ಮಾಡಿದ್ದಾನೆ. ಇದೇ ವೇಳೆ ಆತನನ್ನು ತಡೆದು ನಿಲ್ಲಿಸಿ ಮಹಿಳೆಯನ್ನು ರಕ್ಷಿಸಲು ಜನ ಯತ್ನಿಸುತ್ತಿರುವುದರಿಂದ ಅಲ್ಲಿ ಜೋರಾಗಿ ಬೊಬ್ಬೆ ಕೇಳಿ ಬರುತ್ತಿದೆ. ಇದೇ ವೇಳೆ ಆರೋಪಿ ಒಂದು ಕೈಯಲ್ಲಿ ಸ್ಕ್ರೂಡ್ರೈವರ್ ಹಿಡಿದಿರುವುದು ಕಂಡುಬರುತ್ತದೆ. ಜೊತೆಗೆ ಮಹಿಳೆಯ ಕುರ್ತಾದಲ್ಲಿ ರಕ್ತದ ಕಲೆಗಳು ಕಂಡುಬಂದಿವೆ, ಮತ್ತು ಅವಳು ಅವನನ್ನು ತಡೆದು ನಿಲ್ಲಿಸಿ ತನ್ನನ್ನು ಬದುಕಿಸುವಂತೆ ಕೇಳುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಆದರೆ ಆಕೆಯ ಬುದ್ಧಿಗೇಡಿ ಪಾಪಿಗಂಡ ಜೋರಾಗಿ ಕೂಗುತ್ತಾ ಜನರನ್ನು ಹೆದರಿಸಿ ಓಡಿಸಿ ಬೆದರಿಕೆ ಹಾಕುವುದನ್ನು ಕೇಳಬಹುದು.
ಪಾಪಿ ಗಂಡನ ಕೃತ್ಯದಿಂದಾಗಿ ಮಹಿಳೆಯ ಕುತ್ತಿಗೆ, ತಲೆಬುರುಡೆ ಮತ್ತು ಬಲ ಕಿವಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆ ವ್ಯಕ್ತಿಯ ಕುಟುಂಬವು ವರದಕ್ಷಿಣೆ ಮತ್ತು ಗಂಡು ಮಗು ಹೆರಬೇಕೆಂದು ಕೇಳುತ್ತಿದೆ ಎಂದು ಮಹಿಳೆಯ ತಾಯಿ ಆರೋಪಿಸಿದ್ದಾರೆ. ಆತ ನನ್ನ ಮಗಳಿಗೆ ಕರೆ ಮಾಡಿ, ನೀನು ಮನೆಗೆ ಬಾ, ನಿನ್ನ ವಸ್ತುಗಳನ್ನು ತೆಗೆದುಕೊಂಡು ಹೋಗು, ನಾನು ನಿನ್ನನ್ನು ಬಿಟ್ಟು ಹೋಗುತ್ತೇನೆ ಎಂದು ಹೇಳಿದರು. ಇದೇ ವೇಳೆ ಅವಳು ತನ್ನ ಕಿರಿಯ ಸಹೋದರನನ್ನು ಕರೆದುಕೊಂಡು ಹೋದಳು, ಮತ್ತು ಅಲ್ಲಿ ಅವರು ಅವಳ ಮೇಲೆ ಹಲ್ಲೆ ನಡೆಸಿದರು. ಆತನ ವಿರುದ್ಧ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾನು ಬಯಸುತ್ತೇನೆ ಎಂದು ಮಹಿಳೆಯ ತಾಯಿ ಆರೋಪಿಸಿದ್ದಾರೆ.
ಆ ವ್ಯಕ್ತಿ ತನಗೆ ವಿಚ್ಛೇದನ ನೀಡಿದರೆ ಜೀವನಾಂಶವನ್ನು ತಪ್ಪಿಸಲು ತನ್ನ ಅತ್ತೆ ಮನೆಯವರು ನನ್ನನ್ನು ಹಾಗೂ ನನ್ನ ಮಗಳನ್ನು ಕೊಲ್ಲಲು ಬಯಸಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿ ತಮ್ಮ ವಶದಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.