ಕೆಲಸ ಕೊಟ್ಟ ಮನೆಗೆ ಕನ್ನ ಹಾಕಿದ ಮಹಿಳೆ ಬಂಧನ

ಬೆಂಗಳೂರು: ನಂಬಿಕೆಗೆ ಧಕ್ಕೆ ತರುವ ಘಟನೆ ಮತ್ತೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಕೆಲಸ ಕೊಟ್ಟ ಮನೆಯಲ್ಲಿಯೇ ಕನ್ನ ಹಾಕಿದ ಮಹಿಳಾ ಆರೋಪಿ ಶಾಲಿನಿ (30) ಎಂಬಾಕೆಯನ್ನು ಹೆಚ್ ಎಸ್ ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆ ಚಿತ್ರದುರ್ಗ ಮೂಲದವಳಾಗಿದ್ದು, ಬೆಂಗಳೂರಿನ ಸೋಮಸುಂದರಪಾಳ್ಯದಲ್ಲಿ ವಾಸವಿದ್ದರು. ಆರೋಪಿ ಶಾಲಿನಿ, ಅಕ್ಷಯ್ ಕೃಷ್ಣ ಎಂಬುವವರ ಮನೆಯಲ್ಲಿ ಕಳೆದ ಮೂರು ವರ್ಷಗಳಿಂದ ಮನೆ ಕೆಲಸ ಮಾಡುತ್ತಿದ್ದರು. ವಯಸ್ಕರೊಬ್ಬರ ನೋಡಿಕೊಳ್ಳುವ ಜವಾಬ್ದಾರಿಯನ್ನೂ ಹೊತ್ತಿದ್ದ ಈಕೆ, ಮಾಲೀಕರು ಕೆಲಸಕ್ಕೆ ಹೋದ ಸಮಯದಲ್ಲಿ ಮನೆಯಲ್ಲಿದ್ದ 113 ಗ್ರಾಂ ಚಿನ್ನಾಭರಣವನ್ನು ಕದ್ದು ಪರಾರಿಯಾಗಿದ್ದರು.

ಕಳೆದ ಕೆಲವು ದಿನಗಳಿಂದ ಮನೆಯಲ್ಲಿರುವ ಚಿನ್ನಾಭರಣ ಕಾಣೆಯಾಗಿದ್ದು, ಇದರಿಂದ ಆತಂಕಗೊಂಡ ಮನೆ ಮಾಲೀಕರು ಹೆಚ್ ಎಸ್ ಆರ್ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಶಾಲಿನಿ ಮೇಲೆ ಶಂಕೆ ವ್ಯಕ್ತಪಡಿಸಿ ವಿಚಾರಣೆ ನಡೆಸಿದಾಗ, ಅವಳು ಕಳ್ಳತನದ ವಿಷಯವನ್ನು ಒಪ್ಪಿಕೊಂಡಿದ್ದಾಳೆ. ಪೊಲೀಸರು ಆರೋಪಿ ಶಾಲಿನಿಯಿಂದ ₹10 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
