ಪತ್ನಿಯ ಅಕ್ರಮ ಸಂಬಂಧ: ಮನನೊಂದು ಒಂದೇ ಕುಟುಂಬದ ನಾಲ್ವರ ಸಾಮೂಹಿಕ ಆತ್ಮಹತ್ಯೆ

ಭೋಪಾಲ್:ನಿನಗಿನ್ನೂ ಬದುಕಿದೆ ಆತನನ್ನು ಬಿಟ್ಟಿಬಿಡು, ಅದನ್ನು ಕೆಟ್ಟ ಕನಸೆಂದು ಮರೆತು ಮತ್ತೆ ನಿನ್ನನ್ನು ಸ್ವೀಕರಿಸುತ್ತೇನೆ ಎಂದು ಗಂಡ(Husband) ಎಷ್ಟೇ ಬುದ್ಧಿವಾದ ಹೇಳಿದರೂ ಕಿವಿಗೆ ಹಾಕಿಕೊಳ್ಳದೆ ಮಹಿಳೆ ತನ್ನ ಛಾಳಿ ಮುಂದುವರೆಸಿದ್ದಳು. ಗಂಡ ಬೇಡ ಆತನ ಸ್ನೇಹಿತನೇ ಬೇಕು ಎಂದು ಪಟ್ಟು ಹಿಡಿದಿದ್ದಳು.

ಕೊನೆಗೆ ಈ ನೋವು ಸಹಿಸಲಾಗದೆ ಕುಟುಂಬದ ಎಲ್ಲಾ ಸದಸ್ಯರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದ ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ. ಜುಲೈ 25ರ ರಾತ್ರಿ ಮನೋಹರ್ ಲೋಧಿ (45), ಅವರ ತಾಯಿ ಫೂಲ್ರಾಣಿ (70), ಮಗಳು ಶಿವಾನಿ (18) ಮತ್ತು ಅವರ 16 ವರ್ಷದ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತನಿಖೆಯ ಸಮಯದಲ್ಲಿ ಮನೋಹರ್ ಲೋಧಿಯ ಪತ್ನಿ ದ್ರೌಪದಿ, ಮನೋಹರ್ ಅವರ ಬಾಲ್ಯದ ಸ್ನೇಹಿತನೂ ಆಗಿದ್ದ ಸುರೇಂದ್ರ ಎಂಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾಳೆ ಎಂಬುದು ತಿಳಿದುಬಂದಿದೆ.
ಸುರೇಂದ್ರ ಒಂದು ದಿನ ದ್ರೌಪದಿ ಜತೆ ಇರುವಾಗ ದ್ರೌಪದಿ ಮಗಳು ಅದನ್ನು ನೋಡಿ ತನ್ನ ತಂದೆಗೆ ಹೇಳಿದ್ದಳು. ಆಗ ವಿಷಯ ಬಹಿರಂಗಗೊಂಡಿತ್ತು.ಕುಟುಂಬದವರು ದ್ರೌಪದಿಯೊಂದಿಗೆ ಈ ಕುರಿತು ಮಾತನಾಡಿದ್ದರು. ಆತನನ್ನು ಬಿಟ್ಟುಬಿಡು ಎಂದು ಬುದ್ಧಿವಾದ ಹೇಳಿದ್ದರು, ಆದರೆ ಸುರೇಂದ್ರ ಇಲ್ಲದೆ ತಾನು ಬದುಕಲು ಸಾಧ್ಯವಿಲ್ಲ ಎಂದು ಆಕೆ ಹೇಳಿದ್ದಾಳೆ.
ಒಂದೊಮ್ಮೆ ಆಕೆಯ ಮೇಲೆ ಒತ್ತಡ ಹೇರುವುದನ್ನು ಮುಂದುವರೆಸಿದರೆ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದೀರಾ ಎಂದು ಪ್ರಕರಣ ದಾಖಲಿಸುವುದಾಗಿ ಆಕೆ ಎಚ್ಚರಿಕೆ ನೀಡಿದ್ದಳು.ಮನೋಹರ್ ಕೂಡ ಸುರೇಂದ್ರ ಬಳಿ ಹೋಗಿ ಆಕೆಯನ್ನು ಬಿಟ್ಟುಬಿಡು ಎಂದು ಪರಿಪರಿಯಾಗಿ ಕೇಳಿಕೊಂಡಿದ್ದರು. ಆದರೂ ಯಾವುದೇ ಪ್ರಯೋಜನವಾಗಲಿಲ್ಲ.
ಮನೆಯಲ್ಲಿ ಪದೇ ಪದೆ ಈ ವಿಚಾರವಾಗಿ ಗಲಾಟೆಗಳು ನಡೆಯುತ್ತಿದ್ದವು. ಕೊನೆಗೆ ತಾವೇ ಹೋಗಿಬಿಡೋಣ ಎನ್ನುವ ನಿರ್ಧಾರಕ್ಕೆ ಕುಟುಂಬದವರು ಬಂದಿದ್ದು, ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ತನಿಖೆಯ ನಂತರ, ಪೊಲೀಸರು ಮನೋಹರ್ ಅವರ ಪತ್ನಿ ದ್ರೌಪದಿ ಮತ್ತು ಆಕೆಯ ಪ್ರಿಯಕರ ಸುರೇಂದ್ರ ಅವರನ್ನು ಜೈಲಿಗೆ ಕಳುಹಿಸಿದ್ದಾರೆ.
