ಐಸ್‌ಕ್ರೀಂ ತಿಂದಿದ್ದಕ್ಕೆ ಜೀವ ಬಿಟ್ಟ ಪತ್ನಿ: ಹೃದಯ ವಿದ್ರಾವಕ ಘಟನೆ ಬಿಚ್ಚಿಟ್ಟ ನಟ ದೇವನ್ ಶ್ರೀನಿವಾಸನ್

ಸಾವು ಹೇಳಿ, ಕೇಳಿ ಬರಲ್ಲ. ಸಾವಿಗೆ ದೊಡ್ಡವರು ಚಿಕ್ಕವರು, ಜಾತಿ ಧರ್ಮ, ಲಿಂಗ, ಜಾತಿ ಎಂಬ ಭೇದವಿಲ್ಲ. ಕಾಲನ ಕರೆಗೆ ಎಲ್ಲರೂ ಓಗೊಟ್ಟು ಹೋಗಲೇಬೇಕು. ಕೆಲವೊಮ್ಮೆ ಚಿತ್ರವಿಚಿತ್ರ ಕಾರಣಗಳಿಂದ ಬಾರದ ಲೋಕಕ್ಕೆ ಪಯಣ ಬೆಳೆಸುವವರನ್ನು ನೋಡುತ್ತೇನೆ. ಬಹುಭಾಷಾ ನಟ ದೇವನ್ ಶ್ರೀನಿವಾಸನ್ ಮಾತನಾಡಿ ನನ್ನ ಪತ್ನಿ ಐಸ್‌ಕ್ರೀಂ ತಿಂದಿದ್ದಕ್ಕೆ ಜೀವಬಿಟ್ಟಳು ಎಂದಿದ್ದಾರೆ.

ಕೇರಳ ಮೂಲದ ನಟ ದೇವನ್ ಶ್ರೀನಿವಾಸನ್ ಮಲಯಾಳಂ, ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ನಟಿಸಿರುವುದೇ ಹೆಚ್ಚು. ರಜನಿಕಾಂತ್, ಕಮಲ್ ಹಾಸನ್, ಮೋಹನ್ ಲಾಲ್, ವಿಷ್ಣುವರ್ಧನ್ ಹೀಗೆ ಸ್ಟಾರ್ ನಟರ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಸಾಕಷ್ಟು ಪ್ರಶಸ್ತಿ ಸನ್ಮಾನಗಳು ಅವರನ್ನು ಹುಡುಕಿ ಬಂದಿದೆ. 350ಕ್ಕೂ ಅಧಿಕ ಸಿನಿಮಾಗಳಲ್ಲಿ ದೇವನ್ ನಟಿಸಿದ್ದಾರೆ. ರಾಜಕೀಯರಂಗದಲ್ಲೂ ಅದೃಷ್ಟ ಪರೀಕ್ಷಿಸಿಕೊಂಡಿದ್ದರು.
2019ರಲ್ಲಿ ನಟ ದೇವನ್ ಪತ್ನಿ ಸುಮಾ ವಿಧಿವಶರಾಗಿದ್ದರು. ಐಸ್‌ಕ್ರೀಂ ಅಲರ್ಜಿಯಿಂದ ಅವಳ ಜೀವಕ್ಕೆ ಕುತ್ತು ಬಂದಿತ್ತು ಎಂದು ಅವರು The New Indian Express ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿದ್ದಾರೆ. ದೇವನ್ ಮಾತುಗಳು ವೈರಲ್ ಆಗುತ್ತಿದೆ. ಅರೇ, ಐಸ್‌ಕ್ರೀಂ ತಿಂದರೆ ಅಂಥಾದ್ದೇನಾಗುತ್ತದೆ ಎಂದು ಕೆಲವರು ಹುಬ್ಬೇರಿಸಿದ್ದಾರೆ
ಅದೇನೋ ಗೊತ್ತಿಲ್ಲ ಪತ್ನಿ ಸುಮಾಗೆ ಐಸ್‌ಕ್ರೀಂ ಅಲರ್ಜಿ ಇತ್ತು. ಒಮ್ಮೆ ಚೆನ್ನೈನಲ್ಲಿ ಇದ್ದಾಗ ಐಸ್‌ಕ್ರೀಂ ತಿಂದು ಆಕೆಗೆ ಉಸಿರಾಟದ ಸಮಸ್ಯೆ ಆಗಿತ್ತು. ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದೆವು. ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದರು. ಬಳಿಕ ವೈದ್ಯರು ಇನ್ನು ಮುಂದೆ ಐಸ್‌ಕ್ರೀಂ ತಿನ್ನಬಾರದು ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದರು. ಆಕೆ ಕೂಡ ಕೆಲ ವರ್ಷ ಅದನ್ನು ಫಾಲೋ ಮಾಡಿದ್ಲು” ಎಂದು ದೇವನ್ ನೆನಪಿಸಿಕೊಂಡಿದ್ದಾರೆ.
ಮತ್ತೊಮ್ಮೆ ಐಸ್‌ಕ್ರೀಂ ತಿಂದು ಪತ್ನಿ ಜೀವಬಿಟ್ಟ ವಿಚಾರವನ್ನು ಹಂಚಿಕೊಂಡಿದ್ದಾರೆ. “ಒಮ್ಮೆ ಮಗಳು ಲಕ್ಷ್ಮಿ ಮಗುವಿನ ಜೊತೆ ನಮ್ಮ ಮನೆಗೆ ಬಂದಿದ್ಲು. ನಾನು ಆಗ ಮನೆಯಲ್ಲಿ ಇರಲಿಲ್ಲ. ಚಿತ್ರೀಕರಣ ನಿಮಿತ್ತ ಬೇರೆ ಕರೆ ಇದ್ದೆ. ಮಕ್ಕಳಿಗಂತ ಮಗಳು ಐಸ್‌ಕ್ರೀಂ ತಂದಿದ್ದಾಳೆ. ಎಲ್ಲರೂ ತಿಂದು ಉಳಿದಿದ್ದನ್ನು ಮನೆಯಲ್ಲಿ ಬಿಟ್ಟು ಹೋಗಿದ್ದಾಳೆ. ಆದರೆ ಮನೆಯಲ್ಲಿದ್ದ ಸುಮಾ ವೈದ್ಯರ ಎಚ್ಚರಿಕೆ ಮರೆತು ಐಸ್‌ಕ್ರೀಂ ತಿಂದಿದ್ದಾಳೆ. ನೆಲದ ಮೇಲೆ ಬಿದ್ದು ಒದ್ದಾಡಿದ್ದಾಳೆ. ಮನೆ ಕೆಲಸದವರು ಫೋನ್ ಮಾಡಿ ಹೇಳಿದ್ರು. ಮನೆಗೆ ಹೋಗುವಷ್ಟರಲ್ಲಿ ಪರಿಸ್ಥಿತಿ ಕೈ ಮೀರಿತ್ತು” ಎಂದು ದೇವನ್ ಭಾವುಕರಾಗಿದ್ದಾರೆ.
ಕೂಡಲೇ ಎಲ್ಲಾ ಸೇರಿ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆವು. ಆದರೆ ಪ್ರಯೋಜನವಾಗಲಿಲ್ಲ. ಐಸ್‌ಕ್ರೀಮ್ ಅಲರ್ಜಿಯಿಂದ ಅವಳ ಶ್ವಾಸಕೋಶದಲ್ಲಿ ರಂಧ್ರಗಳಾಗಿತ್ತು. ಆಕೆ ಉಸಿರಾಡಲು ಒಳಗೆ ತೆಗೆದುಕೊಳ್ಳುತ್ತಿದ್ದ ಗಾಳಿ ಸೋರಿಕೆ ಆಗುತ್ತಿತ್ತು. ಅದು ಬಹಳ ಮಾರಕವಾಗಿ ಆಕೆ ಜೀವಬಿಟ್ಟಳು ಎಂದು ದೇವನ್ ವಿವರಿಸಿದ್ದಾರೆ.
ಹಿರಿತೆರೆ ಮಾತ್ರವಲ್ಲ ಕಿರುತೆರೆಯಲ್ಲಿ ಕೂಡ ನಟ ದೇವನ್ ಗುರ್ತಿಸಿಕೊಂಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಆಗಿದೆ. ನಿರ್ಮಾಪಕರಾಗಿ ಚಿತ್ರರಂಗಕ್ಕೆ ಬಂದಿದ್ದ ಅವರು ಬಳಿಕ ಬಣ್ಣ ಹಚ್ಚಲು ಆರಂಭಿಸಿದ್ದರು. ಖಳನಟನಾಗಿ ಪೋಷಕ ನಟನಾಗಿ ಹೆಚ್ಚು ಕಾಣಿಸಿಕೊಂಡಿದ್ದಾರೆ. ದಶಕಗಳ ಹಿಂದೆ ಕನ್ನಡದಲ್ಲಿ ‘ದೀರ್ಘ ಸುಮಂಗಲಿ’ ಹಾಗೂ ‘ರಫ್ ಅಂಡ್ ಟಫ್’ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು.
