ವಿಧವೆ ಸೊಸೆಗೆ ಮಾವನ ಆಸ್ತಿಯಲ್ಲಿ ಜೀವನಾಂಶದ ಹಕ್ಕು; ಸುಪ್ರೀಂ ಕೋರ್ಟ್

ಹೊಸದಿಲ್ಲಿ: ವಿಧವೆಯಾದ ಹಿಂದೂ ಸೊಸೆಯು ತನ್ನ ಮಾವನ ಆಸ್ತಿಯಿಂದ ಜೀವನಾಂಶ ಪಡೆಯಲು ಅರ್ಹಳಾಗಿದ್ದಾಳೆ ಎಂದು ಮನುಸ್ಮೃತಿಯನ್ನು ಉಲ್ಲೇಖಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಪತಿ ಮಾವನ ಜೀವಿತಾವಧಿಯಲ್ಲಿ ಮೃತಪಟ್ಟಿದ್ದಾರೆಯೇ ಅಥವಾ ನಂತರ ಮೃತಪಟ್ಟಿದ್ದಾರೆಯೇ ಎಂಬುದನ್ನು ಲೆಕ್ಕಿಸದೆ ಈ ಹಕ್ಕು ಅನ್ವಯಿಸುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿಗಳಾದ ಪಂಕಜ್ ಮಿಥಲ್ ಮತ್ತು ಎಸ್.ವಿ.ಎನ್.ಭಟ್ಟಿ ಅವರ ಪೀಠವು, ಇಂತಹ ಹಕ್ಕು ವಿಧವೆಯಾದ ಹಿಂದೂ ಸೊಸೆಗೆ ಕೇವಲ ಕಾನೂನು ಕಾಯ್ದೆಯಡಿ ಮಾತ್ರವಲ್ಲದೆ ಸಂವಿಧಾನದಡಿ ಹಾಗೂ ಪ್ರಾಚೀನ ಮನುಸ್ಮೃತಿಯಲ್ಲೂ ಅಡಕವಾಗಿದೆ ಎಂದು ತಿಳಿಸಿದೆ.
ಹಿಂದೂ ಕಾನೂನಿನ ವಿಶೇಷವಾಗಿ ಮನುಸ್ಮೃತಿಯ ಅಧ್ಯಾಯ 8, ಶ್ಲೋಕ 389 ಅನ್ನು ಉಲ್ಲೇಖಿಸಿದ ಪೀಠವು, “ತಾಯಿ, ತಂದೆ, ಹೆಂಡತಿ ಮತ್ತು ಮಗ ಯಾರೂ ತ್ಯಜಿಸಲು ಯೋಗ್ಯರಲ್ಲ ಮತ್ತು ಅವರನ್ನು ತ್ಯಜಿಸುವ ವ್ಯಕ್ತಿಗೆ ದಂಡ ವಿಧಿಸಬೇಕು” ಎಂದು ಹೇಳಿದೆ. ಈ ಶ್ಲೋಕವು ಕುಟುಂಬದ ಮುಖ್ಯಸ್ಥನು ಅವಲಂಬಿತ ಮಹಿಳಾ ಸದಸ್ಯರನ್ನು ಬೆಂಬಲಿಸುವ ಕರ್ತವ್ಯವನ್ನು ಒತ್ತಿಹೇಳುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪತಿಯ ಮರಣದ ಸಮಯವನ್ನು ಆಧರಿಸಿ (ಅಂದರೆ ಮಾವನ ಜೀವಿತಾವಧಿಯಲ್ಲಿ ಅಥವಾ ನಂತರ) ವಿಧವೆ ಸೊಸೆಯರ ನಡುವೆ ವರ್ಗೀಕರಣ ಮಾಡುವುದು ಅತಾರ್ಕಿಕ ಮತ್ತು ಅನಿಯಂತ್ರಿತವಾಗಿದೆ. ಎರಡೂ ಸಂದರ್ಭಗಳಲ್ಲಿ ಅವಳು ಜೀವನಾಂಶಕ್ಕೆ ಅರ್ಹಳಾಗಿದ್ದಾಳೆ. ವಿಧವೆ ಸೊಸೆಗೆ ಜೀವನಾಂಶವನ್ನು ನಿರಾಕರಿಸುವುದು ಅವಳನ್ನು ನಿರ್ಗತಿಕ ಸ್ಥಿತಿಗೆ ಮತ್ತು ಸಾಮಾಜಿಕ ಅಂಚಿಗೆ ತಳ್ಳುತ್ತದೆ, ಇದು ಘನತೆಯಿಂದ ಬದುಕುವ ಅವಳ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಡಾ.ಮಹೇಂದ್ರ ಪ್ರಸಾದ್ ಅವರ ವಿಧವೆ ಸೊಸೆ ಗೀತಾ ಶರ್ಮಾ ಅವರು ಜೀವನಾಂಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸುವಂತೆ ಹೈಕೋರ್ಟ್ ನೀಡಿದ ನಿರ್ದೇಶನವನ್ನು ಪ್ರಶ್ನಿಸಿ ಅವರ ಸಂಬಂಧಿಕರಾದ ಕಾಂಚನಾ ರೈ ಮತ್ತು ಉಮಾ ದೇವಿ ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸಿ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ.