ಈದ್ಗಾ ಮೈದಾನದ ಕಾಂಪೌಂಡ್ ವಿವಾದದಲ್ಲಿ ಕಾಂಪೌಂಡ್ ತೆರವುಗೊಂಡಿದ್ದೇಕೆ

ಹುಬ್ಬಳ್ಳಿ:ನಗರದ ಚನ್ನಮ್ಮ ವೃತ್ತದಲ್ಲಿರುವ ಈದ್ಗಾ ಮೈದಾನದ ಕಾಂಪೌಂಡ್ ಅನ್ನು ತೆರವು ಮಾಡಲಾಗಿದೆ. ಎರಡು ಕಡೆಯ ಕಾಂಪೌಂಡ್ ಅನ್ನು ತೆರವು ಮಾಡಲಾಗಿದೆ. ಈ ಈದ್ಗಾ ಮೈದಾನ ಸಾಕಷ್ಟು ವಿವಾದದಿಂದ ಕೂಡಿತ್ತು. ದಶಕಗಳ ಹಿಂದೆಯೇ ಈದ್ಗಾ ಮೈದಾನದ ಸುತ್ತ ಸಾಕಷ್ಟು ಹೋರಾಟಗಳು ನಡೆದಿವೆ.
ಅಷ್ಟೇ ಅಲ್ಲ ಮೈದಾನದ ಪರ ಹಾಗೂ ವಿರೋಧದ ಹೇಳಿಕೆಗಳು ರಾಷ್ಟ್ರ ಮಟ್ಟದಲ್ಲಿ ಸದ್ದಾಗಿದೆ. ಇದೀಗ ಇಲ್ಲಿನ ಮೈದಾನದ ಕಾಂಪೌಂಡ್ ಅನ್ನು ತೆರವು ಮಾಡಲಾಗಿದೆ. ಅದಕ್ಕೆ ಕಾರಣ ಫ್ಲೈಓವತ್ ಕಾಮಗಾರಿ.
ಹೌದು, ಹುಬ್ಬಳ್ಳಿ ನಗರದಲ್ಲಿ ಫ್ಲೈ ಓವರ್ ಕಾಮಗಾರಿ ನಿರ್ಮಾಣ ಮಾಡಲಾಗುತ್ತಿದೆ. ಚನ್ನಮ್ಮ ವೃತ್ತದಿಂದ ಗದಗ ರಸ್ತೆ ಹಾಗೂ ವಿಜಯಪುರ ರಸ್ತೆ ಕಡೆಗೆ ಫ್ಲೈ ಓವರ್ ಕಾಮಗಾರಿ ಬಹಳ ವೇಗವಾಗಿ ನಡೆಯುತ್ತಿದೆ. ಮೇಲ್ಸೇತುವೆ ಜಾಗಕ್ಕೆ ಈದ್ಗಾ ಮೈದಾನದ ಜಾಗ ಬೇಕಾಗಿದ್ದ ಕಾರಣದಿಂದ ಅನಿವಾರ್ಯವಾಗಿ ಎರಡು ಕಡೆಯ ಕಾಂಪೌಂಡ್ ಅನ್ನು ತೆರವುಗೊಳಿಸಿದ್ದಾರೆ.
ಈ ಹಿಂದೆಯೇ ಮಾರ್ಕ್ ಮಾಡಿದಂತೆ ಜಾಗವನ್ನು ಬಳಸಿಕೊಳ್ಳಲು ಗುತ್ತಿಗೆ ಪಡೆದ ಕಂಪನಿಗೆ ಪಾಲಿಕೆ ಅವಕಾಶ ನೀಡಿದ್ದರಿಂದ, ಎರಡು ದಿನದಿಂದ ಕಂಪೌಂಡ್ ತೆರವುಗೊಳಿಸುವ ಕಾಮಗಾರಿ ನಡೆಸಿದ್ದ ಕಂಪನಿ, ಮೇಲ್ಸೇತುವೆ ಕಾಮಗಾರಿ ಆರಂಭಿಸಲು ಮುಂದಾಗಿದೆ. 1980 ರಲ್ಲಿ ಅಂಜುಮನ್ ಸಂಸ್ಥೆ, ಮೈದಾನದ ಜಾಗದಲ್ಲಿ ವಾಣಿಜ್ಯ ಮಳಿಗೆಯನ್ನು ನಿರ್ಮಾಣ ಮಾಡಲು ಮುಂದಾಗಿತ್ತು. ಆಗ ಮಹಾನಗರ ಪಾಲಿಕೆ ಇದನ್ನು ತಡೆದಿತ್ತು. ನಂತರ ಅದು ಕೋರ್ಟ್ ಮೆಟ್ಟಿಲೇರಿತ್ತು. ಸದ್ಯ ಸುಪ್ರೀಂ ಕೋರ್ಟ್, ಈ ಜಾಗ ಪಾಲಿಕೆಗೆ ಸೇರಿದ್ದು ಎಂದು ಆದೇಶ ನೀಡಿದ್ದರಿಂದ, ಪ್ರಕರಣ ಸುಖಾಂತ್ಯ ಕಂಡಿದೆ.