ಕೋಟ್ಯಧಿಪತಿ ಕುಟುಂಬದಿಂದಲೇ ಗೃಹ ಬಂಧನಕ್ಕೊಳಗಾಗಿದ್ದೇಕೆ?

ಉತ್ತರ ಕನ್ನಡ: ಕಳೆದ ಎರಡು ವರ್ಷಗಳಿಂದ ಪಾಳುಬಿದ್ದ ಕಟ್ಟಡವೊಂದರಲ್ಲಿ ವ್ಯಕ್ತಿಯೊರ್ವನನ್ನು ಗೃಹಬಂಧನದಲ್ಲಿಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಆಲೂರಿನಲ್ಲಿ ನಡೆದಿದೆ.

25 ಏಕರೆಗೂ ಜಾಸ್ತಿ ಭೂಮಿಯ ಒಡೆಯನಾದ ವಿನಾಯಕ ವಸಂತ ಸೋಹನಶೇಟ್ ಕಳೆದ ಎರಡು ವರ್ಷಗಳಿಂದ 2×3 ಅಡಿ ಜಾಗದ ಗೃಹಬಂಧನದಲ್ಲಿ ಇದ್ದು ಈ ಸುದ್ದಿ ಬೆಳಕಿಗೆ ಬರುತ್ತಿದ್ದಂತೆ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾಧ್ಯಕ್ಷ ಮಾಧವ ನಾಯಕ ಮಾಧ್ಯಮದವರೊಂದಿಗೆ ತೆರಳಿ ಯುವಕನ ಬಂಧ ಮುಕ್ತಗೊಳಿಸಿದ್ದಾರೆ.
ಕುಟುಂಬಸ್ಥರಿಂದಲೇ ಗೃಹಬಂಧನ!
ಆಲೂರು ಗ್ರಾಮದ ನಿವಾಸಿ ವಿನಾಯಕ ವಸಂತ ಸೋನಶೇಟ್ ಎಂಬ ಮಾನಸಿಕ ಅಸ್ವಸ್ಥನನ್ನು ಆತನ ಅಣ್ಣ ಸಂಜಯ್ ಸೇರಿದಂತೆ ಕುಟುಂಬಸ್ಥರೇ ಗೃಹಬಂಧನದಲ್ಲಿ ಇರಿಸಿದ್ದರು. ಹೊಲದ ಮಧ್ಯೆ ವಾಸಕ್ಕೂ ಯೋಗ್ಯವಲ್ಲದ ಕಟ್ಟಡದಲ್ಲಿ ಕಾಲಿಗೆ ಸರಪಳಿ ಕಟ್ಟಿ ಆಚೀಚೆ ಓಡಾಡುವಷ್ಟು ಮಾತ್ರ ಅವಕಾಶ ನೀಡಿ ಗೃಹ ಬಂಧನದಲ್ಲಿ ಇರಿಸಲಾಗಿತ್ತು. ದಾಂಡೇಲಿಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಮೂವರು ಮಕ್ಕಳ ಪೈಕಿ ವಿನಾಯಕ್ ಕೊನೆಯವನಾಗಿದ್ದು, ಆತನ ತಂದೆ ಅಂಚೆ ಇಲಾಖೆಯಲ್ಲಿ ಕೆಲಸದಲ್ಲಿದ್ದಾಗಲೇ ಮೃತಪಟ್ಟಿದ್ದರು. ಅನುಕಂಪದ ಆಧಾರದಡಿ ವಿನಾಯಕ್ ತನಗೆ ಸಿಕ್ಕ ಪೋಸ್ಟ್ ಮ್ಯಾನ್ ಕೆಲಸ ನಿರ್ವಹಿಸುತ್ತಿದ್ದ. ಆದರೆ, ಕೆಲವು ವರ್ಷಗಳಿಂದ ಈತ ಮಾನಸಿಕ ಅಸ್ವಸ್ಥನಾಗಿದ್ದು, ಕುಟುಂಬಸ್ಥರಿಗೆ ಉಪಟಳ ನೀಡ್ತಿದ್ದದ್ದರಿಂದ ಆತನ ಅಣ್ಣ ಸೇರಿದಂತೆ ಕುಟುಂಬಸ್ಥರು ಅಮಾನವೀಯವಾಗಿ ಗೃಹಬಂಧನದಲ್ಲಿ ಇರಿಸಿದ್ದರು ಎನ್ನಲಾಗಿದೆ.
ಆಸ್ತಿವಂತರಾಗಿದ್ದ ವಿನಾಯಕ ಮನೆಗೆ ಬೆಂಕಿ ಹಚ್ಚಿದ್ದ!
ಸ್ಥಳೀಯರ ಪ್ರಕಾರ, ವಿನಾಯಕ ಕುಟುಂಬಕ್ಕೆ ಹೊಲ ಸೇರಿದಂತೆ 25 ಎಕರೆ ಜಾಗವಿದ್ದು, ವಿನಾಯಕ್‌ನ ದೊಡ್ಡಣ್ಣ ಸಂಜಯನೇ ಆಸ್ತಿಯ ಎಲ್ಲಾ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದ. ಕಳೆದ ಹಲವು ವರ್ಷಗಳ ಹಿಂದೆ ನಂತರದಲ್ಲಿ ವಿನಾಯಕನಿಗೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರಿಂದ ಆಸ್ತಿಗೆಲ್ಲಾ ದೊಡ್ಡಣ್ಣನೇ ವಾರಸುದಾರರನಾಗಿದ್ದ. ಕೆಲವು ವರ್ಷಗಳಿಂದ ವಿನಾಯಕ ಮಾನಸಿಕ ಅಸ್ವಸ್ಥನಾಗಿದ್ದು, ತಾನಿದ್ದ ಮನೆ ಹಾಗೂ ತಮ್ಮ ಕಬ್ಬಿನ ಗದ್ದೆಗೆ ಬೆಂಕಿ ಹಚ್ಚುತ್ತಿದ್ದ ಎಂದು ಅವರ ಸಂಬಂಧಿಕರು ಆರೋಪಿಸುತ್ತಿದ್ದರು. ಈತನ ಉಪಟಳದಿಂದ ಬೇಸತ್ತ ಆತನ ಮನೆಯವರು, ಇದರಿಂದ ಬೇಸತ್ತು ಹೊಲದ ಮಧ್ಯೆ ವಾಸಕ್ಕೆ ಯೋಗ್ಯವಲ್ಲದ ಮನೆಯಲ್ಲಿ ವಿನಾಯಕನ ಕಾಲಿಗೆ ಸರಪಳಿ ಕಟ್ಟಿ ಕೂಡಿ ಹಾಕಿದ್ದರು.
ಮಾಹಿತಿಯನ್ನು ತಿಳಿದು ಸ್ಥಳಕ್ಕೆ ಧಾವಿಸಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವಿಪತ್ತು ನಿರ್ವಹಣಾ ಸಮಿತಿ ಜಿಲ್ಲಾ ಮುಖ್ಯಸ್ಥ ಹಾಗೂ ಜನಶಕ್ತಿ ವೇದಿಕೆಯ ಜಿಲ್ಲಾಧ್ಯಕ್ಷ ಮಾಧವ ನಾಯಕ ನೇತೃತ್ವದಲ್ಲಿ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಮತ್ತು ತಾಲೂಕಾಡಳಿತದ ಸಹಕಾರದಲ್ಲಿ ರಕ್ಷಣೆ ಮಾಡಲಾಗಿದೆ. ಈ ರಕ್ಷಣಾ ಕಾರ್ಯದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ರಾಮಾ ನಾಯ್ಕ, ಜನಶಕ್ತಿ ವೇದಿಕೆಯ ಬಾಬು ಶೇಟ್, ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ನಾಯ್ಕ, ಪಿಎಸ್‌ಐ ಅಮೀನ್ ಅತ್ತಾರ, ಆರೋಗ್ಯ ನಿರೀಕ್ಷಕ ಗೋಪಿ ಚೌವ್ಹಾಣ್ ಮುಂತಾದವರು ಭಾಗಿಯಾಗಿದ್ದರು.
ವಿನಾಯಕ್ ಸಹೋದರ ಸಂಜಯ್ ಜೊತೆ ಕರೆತಂದು ದಾಂಡೇಲಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಆರೋಗ್ಯ ತಪಾಸಣೆ, ಕಾರವಾರ ಜಿಲ್ಲಾಸ್ಪತ್ರೆಗೆ ಕರೆತರಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಾನಸಿಕ ಚಿಕಿತ್ಸಾ ಆಸ್ಪತ್ರೆಗೆ ಕಳುಹಿಸಿಕೊಡುವ ಪ್ರಕ್ರಿಯೆ ನಡೆಸಲಾಗಿದೆ. ಒಟ್ಟಿನಲ್ಲಿ ಎರಡು ವರ್ಷಗಳಿಂದ ಸರಪಳಿಯ ಬಂಧನಕ್ಕೊಳಗಾಗಿದ್ದ ವಿನಾಯಕ ಸೋನ್‌ಶೇಟ್ ರೆಡ್ ಕ್ರಾಸ್ ಸಂಸ್ಥೆಯ ಮಾನವೀಯ ಕೆಲಸದಿಂದ ಕೊನೆಗೂ ಮುಕ್ತಿ ಸಿಕ್ಕಿದ್ದು, ಆರೋಗ್ಯ ಸುಧಾರಿಸಿಕೊಳ್ಳಲು ಚಿಕಿತ್ಸೆ ನೀಡುವ ವ್ಯವಸ್ಥೆಯನ್ನೂ ಕೈಗೊಳ್ಳಲಾಗುತ್ತಿದೆ.