ರೈತರನ್ನು ಏಕೆ ಬಂಧಿಸಬಾರದು?: ಕೃಷಿ ಕೂಳೆ ಸುಡುವ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನಿಂದ ಖಡಕ್ ಪ್ರಶ್ನೆ

ಹೊಸದಿಲ್ಲಿ: ಚಳಿಗಾಲದಲ್ಲಿ ಮಾಲಿನ್ಯದ ಮಟ್ಟ ಹೆಚ್ಚಾಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿರುವ ಕೃಷಿ ತ್ಯಾಜ್ಯ(ಕೂಳೆ) ಸುಡುವ ರೈತರನ್ನು ಏಕೆ ಬಂಧಿಸಬಾರದು ಎಂದು ಪಂಜಾಬ್ ಸರಕಾರಕ್ಕೆ ಪ್ರಶ್ನಿಸಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವು, ಈ ಬಗ್ಗೆ ನೀವು ನಿರ್ಧಾರ ತೆಗೆದುಕೊಳ್ಳಿ, ಇಲ್ಲವಾದರೆ ನಾವೇ ಆದೇಶ ಹೊರಡಿಸುತ್ತೇವೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ, ಹರ್ಯಾಣ, ರಾಜಸ್ಥಾನ ಮತ್ತು ಪಂಜಾಬ್ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಲ್ಲಿ ಖಾಲಿ ಹುದ್ದೆಗಳ ಭರ್ತಿ ಕುರಿತ ಸ್ವಯಂಪ್ರೇರಿತ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪೀಠವು ವಿಚಾರಣೆ ನಡೆಸುತ್ತಿದೆ.
ನ್ಯಾಯಾಲಯ ಈ ರಾಜ್ಯಗಳಿಗೆ ವಾಯು ಗುಣಮಟ್ಟ ನಿರ್ವಹಣಾ ಆಯೋಗ (CAQM) ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB)ಯಲ್ಲಿನ ಖಾಲಿ ಹುದ್ದೆಗಳನ್ನು ಮೂರು ತಿಂಗಳೊಳಗೆ ಭರ್ತಿ ಮಾಡುವಂತೆ ಸೂಚಿಸಿದೆ.
ತಪ್ಪಿತಸ್ಥ ರೈತರನ್ನು ಕೂಳೆ ಸುಟ್ಟಿದ್ದಕ್ಕಾಗಿ ಏಕೆ ಬಂಧಿಸಬಾರದು ಮತ್ತು ಶಿಕ್ಷೆ ವಿಧಿಸಬಾರದು? ಎಂದು ವಿಚಾರಣೆ ವೇಳೆ ಪಂಜಾಬ್ ಸರಕಾರದ ಪರ ನ್ಯಾಯಾಲಯದಲ್ಲಿ ಹಾಜರಾಗಿದ್ದ ಹಿರಿಯ ವಕೀಲ ರಾಹುಲ್ ಮೆಹ್ರಾ ಅವರಿಗೆ ಸಿಜೆಐ ಪ್ರಶ್ನಿಸಿದ್ದಾರೆ.
ರೈತರಿಂದಾಗಿಯೇ ನಾವು ಅನ್ನ ತಿನ್ನುತ್ತಿದ್ದೇವೆ. ಪರಿಸರವನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಅರ್ಥವಲ್ಲ. ನೀವು ರೈತರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಏಕೆ ಯೋಚಿಸಬಾರದು? ಕೆಲವರನ್ನು ಜೈಲಿಗೆ ಕಳುಹಿಸಿದರೆ ಸರಿಯಾದ ಸಂದೇಶ ರವಾನೆಯಾಗುತ್ತದೆ. ಪರಿಸರವನ್ನು ರಕ್ಷಿಸುವ ನಿಜವಾದ ಉದ್ದೇಶ ನಿಮಗಿದ್ದರೆ, ಏಕೆ ಹಿಂಜರಿಯಬೇಕು? ಎಂದು ಸಿಜೆಐ ಪ್ರಶ್ನಿಸಿದರು.
