ಸೌದಿಯಲ್ಲಿ ಮಧ್ಯಾಹ್ನ ಹೊರಗಿನ ಕೆಲಸ 3 ತಿಂಗಳಿಗೆ ನಿಷೇಧವೇಕೆ?

ರಿಯಾದ್ :ಸೌದಿ ಅರೇಬಿಯಾದಲ್ಲಿ ಮಧ್ಯಾಹ್ನ ನಂತರ ಕೆಲಸ ಮಾಡುವುದನ್ನು 3 ತಿಂಗಳ ಕಾಲ ನಿಷೇಧಿಸಲಾಗಿದೆ. ವಿಪರೀತ ಬಿಸಿಲಿನಿಂದ ಉಷ್ಣತೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕೆಲಸ ಮಾಡುವುದನ್ನು ಬ್ಯಾನ್ ಮಾಡಿದೆ. ಈ ನಿಯಮವು ಭಾನುವಾರ (ಜೂನ್ 15) ರಿಂದ ಜಾರಿಗೆ ಬರಲಿದೆ.
ಹೀಗಾಗಿ ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯವು ಖಾಸಗಿ ಕ್ಷೇತ್ರದ ಎಲ್ಲಾ ಕಂಪನಿಗಳು ಮತ್ತು ಸಂಸ್ಥೆಗಳಿಗಾಗಿ ಮೂರು ತಿಂಗಳ ಮಧ್ಯಾಹ್ನ ಔಟ್ಡೋರ್ ಕೆಲಸ ಮಾಡುವಂತಿಲ್ಲ ಎಂದು ಕಟ್ಟುನಿಟ್ಟಿನ ನಿಯಮವನ್ನು ಘೋಷಿಸಿದೆ.
ರಾಷ್ಟ್ರೀಯ ಉದ್ಯೋಗ ಭದ್ರತೆ ಮತ್ತು ಆರೋಗ್ಯ ಪರಿಷತ್ತಿನ ಸಹಯೋಗದಲ್ಲಿ ಜಾರಿಗೊಂಡಿರುವ ಈ ನಿರ್ಧಾರವು, ಪ್ರತಿದಿನ ಮಧ್ಯಾಹ್ನ 12 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಬಿಸಿಲು ನೇರವಾಗಿ ಬೀಳುವ ಸಮಯದಲ್ಲಿ ಹೊರಗಡೆ ಕೆಲಸ ಮಾಡುವಂತಿಲ್ಲ ಎಂದು ಆದೇಶಿಸಿದೆ. ಈ ನಿಷೇಧವು ಸೆಪ್ಟೆಂಬರ್ 15 ರವರೆಗೆ ಮುಂದುವರಿಯಲಿದೆ.
ಸಚಿವಾಲಯದ ಈ ನಿಯಮವು ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಮಹತ್ವ ಎನಿಸಿದೆ. ದಿನದ ಅತ್ಯಧಿಕ ಉಷ್ಣತೆಯ ಸಮಯದಲ್ಲಿ ನೇರ ಬಿಸಿಲಿನ ಅಡಿಯಲ್ಲಿ ಕೆಲಸ ಮಾಡುವುದನ್ನು ನಿಷೇಧಿಸುವ ಮೂಲಕ ಆರೋಗ್ಯ ಸಂಬಂಧಿತ ಅಪಾಯಗಳನ್ನು ತಪ್ಪಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಇದರಿಂದ ಆರೋಗ್ಯಕರ ಮತ್ತು ಸುರಕ್ಷಿತ ಕೆಲಸದ ವಾತಾವರಣ ಜೊತೆಗೆ ಅಂತರಾಷ್ಟ್ರೀಯ ಉದ್ಯೋಗ ಭದ್ರತೆ ಮತ್ತು ಆರೋಗ್ಯ ಪ್ರಮಾಣಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸಿದೆ.
ಈ ನಿಯಮವನ್ನು ಪಾಲಿಸಲು ಕಂಪೆನಿಗಳು ತಮ್ಮ ಕೆಲಸದ ವೇಳಾಪಟ್ಟಿಯನ್ನು ಸರಿಪಡಿಸಿಕೊಳ್ಳಬೇಕೆಂದು ಮಾನವ ಸಂಪನ್ಮೂಲ ಮತ್ತು ಸಬಲೀಕರಣ ಸಚಿವಾಲಯವು ಸೂಚಿಸಿದೆ. ಈ ನಿರ್ಧಾರದ ನಿಬಂಧನೆಗಳನ್ನು ಪಾಲಿಸಲು ಕರೆ ನೀಡಿದೆ. ಅಪಘಾತಗಳಿಂದ ಮುಕ್ತವಾದ ಸುರಕ್ಷಿತ ಕೆಲಸದ ವಾತಾವರಣವನ್ನು ಖಚಿತಪಡಿಸುವುದು ಮತ್ತು ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಉಂಟಾಗುವ ಔದ್ಯೋಗಿಕ ಗಾಯಗಳು ಮತ್ತು ರೋಗಗಳನ್ನು ಕಡಿಮೆ ಮಾಡಲು ತಡೆಗಟ್ಟುವ ಕ್ರಮಗಳ ದಕ್ಷತೆ ಮತ್ತು ಪರಿಣಾಮಕಾರಿಯಾಗಿ ಹೆಚ್ಚಿಸುವುದು ಇದರ ಗುರಿಯಾಗಿದೆ. ಇದು ಉತ್ಪಾದಕತೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಮಾನವ ಸಂಪನ್ಮೂಲ ಮತ್ತು ಸಬಲೀಕರಣ ಸಚಿವಾಲಯ ತಿಳಿಸಿದೆ.
ಸಚಿವಾಲಯವು ತನ್ನ ವೆಬ್ಸೈಟ್ನಲ್ಲಿ ಸೂರ್ಯನ ಉಷ್ಣತೆಯ ಪರಿಣಾಮ ಮತ್ತು ತಾಪಮಾನ ವರ್ಧನೆಯಿಂದ ಉಂಟಾಗುವ ಅನಾರೋಗ್ಯವನ್ನು ತಡೆಯುವ ಕ್ರಮಗಳ ಕುರಿತು Procedural ಮಾರ್ಗಸೂಚಿಯನ್ನು ಪ್ರಕಟಿಸಿದೆ. ಅದೇ ರೀತಿ ಸಾರ್ವಜನಿಕರು ಯಾವುದೇ ಉಲ್ಲಂಘನೆಗಳನ್ನು 19911 ಕಸ್ಟಮರ್ ಸೇವಾ ಹಾಟ್ಲೈನ್ ಅಥವಾ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಮೂಲಕ ವರದಿ ಮಾಡಬಹುದೆಂದು ಸಚಿವಾಲಯ ಸೂಚಿಸಿದೆ.