ನಿದ್ರಿಸುತ್ತಿದ್ದ ಪತ್ನಿಯ ಮೇಲೆ ಕಲ್ಲು ಹಾಕಿ ಪತಿ ಕೊಂ*ದದ್ದೇಕೆ?

ಗೋರಖ್‌ಪುರ: ಹಣದ ವಿಚಾರಕ್ಕೆ ನಡೆದ ಸಣ್ಣ ಜಗಳ ಕೊಲೆ(Murder)ಯಲ್ಲಿ ಅಂತ್ಯಗೊಂಡಿದೆ. ಕೋಪದಲ್ಲಿದ್ದ ಗಂಡ ನಿದ್ರಿಸುತ್ತಿರುವ ಪತ್ನಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶ ಗೋರಖ್ಪುರದಲ್ಲಿ ನಡೆದಿದೆ. ಬಾಲಕ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ಆರೋಪಿ ತನ್ನ 13 ವರ್ಷದ ಮಗನನ್ನು ಬೆನ್ನಟ್ಟಿದ್ದಾನೆ ಬಳಿಕ ಬಾಲಕ ಹೇಗೋ ತಪ್ಪಿಸಿಕೊಂಡಿದ್ದಾನೆ.

ಮೃತ ಆಶಾ ಭಾರತಿ ಕಸ್ತೂರ್ ಬಾ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಪೊಲೀಸರ ಪ್ರಕಾರ, ಮೆಡಿಕಲ್ ಸ್ಟೋರ್ ನಡೆಸುತ್ತಿರುವ ಅವರ ಪತಿ ರವಿ ಪ್ರತಾಪ್ ಪ್ರತಿ ತಿಂಗಳು 15,000 ರೂ. ನೀಡುವಂತೆ ಆಕೆಯ ಮೇಲೆ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ.
ಆಶಾ ಆತನಿಗೆ ಹಣ ನೀಡಲು ನಿರಾಕರಿಸಿ ಕೇವಲ 5 ಸಾವಿರ ರೂ. ನೀಡಿದ್ದಕ್ಕೆ ಇಬ್ಬರ ನಡುವೆ ಜಗಳ ಹೆಚ್ಚಾಗಿತ್ತು. ಇದೇ ವಿಚಾರಕ್ಕೆ ಆಗಾಗ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು.
ಘಟನೆಯ ರಾತ್ರಿ ಆರೋಪಿ ತನ್ನ ಪತ್ನಿ ಮಲಗಿದ್ದಾಗ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ.ಶಬ್ದದಿಂದ ಎಚ್ಚರಗೊಂಡ ಅವರ 13 ವರ್ಷದ ಮಗ ತನ್ನ ತಂದೆಯನ್ನು ತಡೆಯಲು ಪ್ರಯತ್ನಿಸಿದ್ದ, ಆಗ ಮಗನ ಮೇಲೂ ಹಲ್ಲೆಗೆ ಮುಂದಾಗಿದ್ದ.
ಬಾಲಕ ತನ್ನ ತಂದೆಯ ದಾಳಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ ಮತ್ತು ಅಕ್ಕಪಕ್ಕದ ಮನೆಯವರಿಗೆ ಮಾಹಿತಿ ನೀಡಿದಾಗ ಅವರು ಸ್ಥಳಕ್ಕೆ ಓಡಿಬಂದು ಆಶಾಳನ್ನು ಗೋರಖ್‌ಪುರ ವೈದ್ಯಕೀಯ ಕಾಲೇಜಿಗೆ ಕರೆದೊಯ್ದರು. ಆದರೆ, ವೈದ್ಯರು ಆಕೆ ಬರುವಷ್ಟರಲ್ಲಿ ಮೃತಪಟ್ಟಿದ್ದಾರೆಂದು ಘೋಷಿಸಿದರು.
ಗೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದಾಳಿಯ ನಂತರ ರವಿ ಪ್ರತಾಪ್ ಸ್ಥಳದಿಂದ ಪರಾರಿಯಾಗಿದ್ದು, ತಲೆಮರೆಸಿಕೊಂಡಿದ್ದಾರೆ ಎಂದು ಠಾಣಾಧಿಕಾರಿ ಅಂಜುಲ್ ಚತುರ್ವೇದಿ ದೃಢಪಡಿಸಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಪ್ರಸ್ತುತ ಶೋಧ ನಡೆಯುತ್ತಿದೆ.
