‘ಜೈಲಿನಲ್ಲಿ ನನಗೇನೇ ಆದರೂ ಅಸಿಮ್ ಮುನೀರ್ ಕಾರಣ’ – ಇಮ್ರಾನ್ ಖಾನ್ ವಾಗ್ದಾಳಿ

ನವದೆಹಲಿ: ಜೈಲಿನಲ್ಲಿ ಇರಿಸಲಾಗಿರುವ ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ ಇಂದು ಪಾಕಿಸ್ತಾನದ ಸೇನಾ ಮುಖ್ಯಸ್ಥರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಸ್ಟಡಿಯಲ್ಲಿ ತಮಗೆ ಯಾವುದೇ ತೊಂದರೆ ಸಂಭವಿಸಿದರೆ ಅದಕ್ಕೆ ಪಾಕ್ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರೇ ಹೊಣೆ ಎಂದಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, 72 ವರ್ಷದ ನಾನು ಮತ್ತು ನನ್ನ ಪತ್ನಿ ಬುಷ್ರಾ ಬೀಬಿ ಇಬ್ಬರೂ ಜೈಲಿನಲ್ಲಿ ಅಮಾನವೀಯ ವರ್ತನೆಗೆ ಒಳಗಾಗುತ್ತಿದ್ದೇವೆ ಎಂದು ಹೇಳಿದ್ದಾರೆ.

“ನಮ್ಮ ಸೆಲ್‌ನಲ್ಲಿರುವ ಟಿವಿಯನ್ನು ಸಹ ಆಫ್ ಮಾಡಲಾಗಿದೆ. ನಮ್ಮಿಬ್ಬರಿಗೂ ಎಲ್ಲಾ ಮೂಲಭೂತ ಮಾನವ ಮತ್ತು ಕಾನೂನು ಹಕ್ಕುಗಳನ್ನು ಅಮಾನತುಗೊಳಿಸಲಾಗಿದೆ” ಎಂದು ಅವರು ಬರೆದಿದ್ದಾರೆ. ಜೈಲು ಸೂಪರಿಂಟೆಂಡೆಂಟ್ ಮತ್ತು ಕರ್ನಲ್ ಒಬ್ಬರು ಅಸಿಮ್ ಮುನೀರ್ ಅವರ ಆದೇಶದ ಮೇರೆಗೆ ಈ ರೀತಿ ವರ್ತಿಸುತ್ತಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.
ಜೈಲಿನಲ್ಲಿ ತನಗೆ ಏನಾದರೂ ಸಂಭವಿಸಿದರೆ ಸೇನಾ ಮುಖ್ಯಸ್ಥರನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡುವಂತೆ ಇಮ್ರಾನ್ ಖಾನ್ ತಮ್ಮ ಪಕ್ಷದ ಸದಸ್ಯರಿಗೆ ಸೂಚಿಸಿದ್ದಾರೆ. “ನಾನು ನನ್ನ ಪಕ್ಷಕ್ಕೆ ಸ್ಪಷ್ಟ ಸೂಚನೆಗಳನ್ನು ನೀಡುತ್ತೇನೆ. ಜೈಲಿನಲ್ಲಿ ನನಗೆ ಏನಾದರೂ ಸಂಭವಿಸಿದರೆ ಅಸಿಮ್ ಮುನೀರ್ ಅವರನ್ನು ಅದಕ್ಕೆ ಹೊಣೆಗಾರರನ್ನಾಗಿ ಮಾಡಬೇಕು” ಎಂದು ಅವರು ಬರೆದಿದ್ದಾರೆ. “ನಾನು ನನ್ನ ಜೀವನವನ್ನು ಜೈಲಿನಲ್ಲಿ ಕಳೆಯಲು ಸಿದ್ಧನಿದ್ದೇನೆ. ಆದರೆ, ನಾನು ಎಂದಿಗೂ ದಬ್ಬಾಳಿಕೆಗೆ ಮಣಿಯುವುದಿಲ್ಲ” ಎಂದು ಅವರು ಬರೆದಿದ್ದಾರೆ.