ಮದುವೆ ಆಭರಣ ಕಳವು: ಸವಸ್ತ್ರದಲ್ಲೇ ನ್ಯಾಯಕ್ಕಾಗಿ ಕಣ್ಣೀರಿಟ್ಟ CRPF ಮಹಿಳೆ

ಜೂನ್ 24 ರಂದು ತಮಿಳುನಾಡಿನ ಪೊನ್ನೈ ಬಳಿಯ ನಾರಾಯಣಪುರಂ ಗ್ರಾಮದಲ್ಲಿರುವ ತನ್ನ ಮನೆಯಲ್ಲಿ ಕಳ್ಳತನ ನಡೆದಿದೆ. ಆ ಸಮಯದಲ್ಲಿ ತಮ್ಮ ತಂದೆ ಮತ್ತು ಸಹೋದರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ತಾಯಿ ದನಗಳನ್ನು ಮೇಯಿಸಲೆಂದು ಜಮೀನಿಗೆ ಹೋಗಿದ್ದರು ಎಂದು ಕಲಾವತಿ ಹೇಳಿದ್ದಾರೆ.

ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯೊಳಗೆ ನುಗ್ಗಿದ ಕಳ್ಳರು ಬೀಗ ಮುರಿದು ನನ್ನ ಮದುವೆಗೆ ಇಟ್ಟಿದ್ದ ಎಲ್ಲಾ ಆಭರಣಗಳು ಕಳವು ಮಾಡಿದ್ದಾರೆ. ನನ್ನ ತಾಯಿ ಸಂಜೆ 5.30 ರ ಹೊತ್ತಿಗೆ ಹಿಂದಿರುಗಿದಾಗ ಬೀಗ ಮುರಿದು ಆಭರಣಗಳು ಕಳವಾಗಿರುವುದು ಗೊತ್ತಾಗಿದೆ. ಬಳಿಕ ಅವರು ಜೂನ್ 24 ರಂದು ಈ ಬಗ್ಗೆ ಸ್ಥಳೀಯ ಟಾಣೆಯಲ್ಲಿ ದೂರು ದಾಖಲಿಸಿದರು. ಆದರೆ ಜೂನ್ 25 ರಂದು ಮುಖ್ಯಮಂತ್ರಿಯವರ ಭದ್ರತಾ ಕರ್ತವ್ಯವಿದೆ ಎಂದು ಹೇಳಿ ಯಾರೂ ತನಿಖೆಗೆ ಬರಲಿಲ್ಲ. ನಂತರ ಬೆರಳಚ್ಚು ಸಂಗ್ರಹಿಸಿ ಜೂನ್ 28 ರಂದು ಎಫ್‌ಐಆರ್ ದಾಖಲಿಸಲಾಯಿತು ಎಂದು ಕಲಾವತಿ ವೀಡಿಯೊದಲ್ಲಿ ಹೇಳಿದ್ದಾರೆ.
ತನ್ನ ಮದುವೆಗಾಗಿ ಉಳಿಸಿದ್ದನ್ನೆಲ್ಲಾ ಕಳೆದುಕೊಂಡು ಕುಟುಂಬವು ತುಂಬಾ ದುಃಖಿತವಾಗಿದೆ ಎಂದು ಅವರು ಹೇಳಿದರು. ಪೊಲೀಸರನ್ನು ಸಂಪರ್ಕಿಸಲು ಪದೇ ಪದೇ ಪ್ರಯತ್ನಿಸಿದರೂ ಅವರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂದು ಅವರು ಬೇಸ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋವನ್ನು ಬಿಜೆಪಿ ನಾಯಕ ಕೆ ಅಣ್ಣಾಮಲೈ ಅವರು ತಮ್ಮ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. “ಯಾವ ರೀತಿಯ ಆಡಳಿತವು ಸಮವಸ್ತ್ರದಲ್ಲಿರುವ ಮಹಿಳೆ ಆನ್‌ಲೈನ್‌ನಲ್ಲಿ ನ್ಯಾಯಕ್ಕಾಗಿ ಬೇಡಿಕೊಳ್ಳುವಂತೆ ಒತ್ತಾಯಿಸುತ್ತದೆ? ಇದು ಕೇವಲ ಕಾನೂನುಬಾಹಿರತೆಯಲ್ಲ, ಇದು ಡಿಎಂಕೆಯ ಆಡಳಿತದ ಮಾದರಿಯಾಗಿದೆ, ಅಲ್ಲಿ ಆರೋಪಿಗಳು ಮುಕ್ತವಾಗಿ ಓಡಾಡುತ್ತಿದ್ದಾರೆ ಮತ್ತು ನಮ್ಮ ರಾಷ್ಟ್ರದ ರಕ್ಷಕರು ಸಹಾಯಕ್ಕಾಗಿ ಬೇಡಿಕೊಳ್ಳುತ್ತಾರೆ” ಎಂದು ಬರೆದಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ ವೆಲ್ಲೂರು ಜಿಲ್ಲಾ ಪೊಲೀಸರು ಹೇಳಿಕೆ ನೀಡಿದ್ದು, ಕಲಾವತಿಯವರ ತಂದೆ ಕುಮಾರಸಾಮಿ ಜೂನ್ 24 ರಂದು ತಮ್ಮ ಮನೆಯಲ್ಲಿ ಕಳ್ಳತನ ನಡೆದಿರುವ ಬಗ್ಗೆ ದೂರು ನೀಡಿದ್ದರು. ಅವರ ದೂರಿನ ಪ್ರಕಾರ, ಕಲಾವತಿಯವರ ಮದುವೆಗಾಗಿ ಇಟ್ಟಿದ್ದ 15 ಪವನ್ ಚಿನ್ನಾಭರಣ, 50,000 ರೂ. ನಗದು ಮತ್ತು ಒಂದು ರೇಷ್ಮೆ ಸೀರೆಯನ್ನು ಕಳವು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಜೂನ್ 25 ರಂದು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಬೆರಳಚ್ಚು ಮಾದರಿಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
