ವಯಸ್ಸಿನ ಅಂತರ ಮೀರಿಸಿದ ಶ್ರೀಮಂತಿಕೆ: 19ರ ಯುವತಿಯನ್ನು ವರಿಸಿದ ವೃದ್ಧ; ಗಿಫ್ಟ್ ನೋಡಿ ದಂಗಾದ ನೆಟ್ಟಿಗರು!

ಮದುವೆ ಸ್ವರ್ಗದಲ್ಲಿ ನಿಗದಿಯಾಗುತ್ತಾ? ಗೊತ್ತಿಲ್ಲ ಆದರೆ ಭೂಮಿ ಮೇಲೆ ಆಗುವುದಂತೂ ನಿಜ ಯಾರನ್ನೂ ಯಾವಾಗ ಹೇಗೆ ಮದುವೆಯಾಗಬೇಕು ಎಂಬುದು ಮೊದಲೇ ನಿರ್ಧಾರವಾಗಿರುತ್ತೆ ಅಂತಾರೆ ಕೆಲವರು. ಅದೇನೆ ಇರಲಿ ಇಲ್ಲೊಬ್ಬಳು 19 ವರ್ಷದ ಹುಡುಗಿ ವೃದ್ಧನನ್ನು ಮದುವೆಯಾಗಿದ್ದಾಳೆ. ಈ ವಿಚಾರವೀಗ ಇಂಟರ್‌ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹೌದು ಸೌದಿ ಅರೇಬಿಯಾದಲ್ಲಿ ಈ ವಿಚಿತ್ರ ಎನಿಸುವ ಮದುವೆ ನಡೆದಿದೆ. ಅನೇಕ ಮುಸ್ಲಿಂ ರಾಷ್ಟ್ರಗಳಲ್ಲಿ ಬಡತನದ ಕಾರಣಕ್ಕೆ ಕೆಲವರು ತಮ್ಮ ಪುಟ್ಟ ಮಕ್ಕಳಿಗೆ ವಯಸ್ಕ ಅಥವಾ ವೃದ್ಧ ಶ್ರೀಮಂತರ ಜೊತೆ, ಮಕ್ಕಳಿಗೆ ಮದುವೆ ಅಂದರೆ ಏನು ಎಂದು ತಿಳಿಯುವ ಮೊದಲೇ ಮದುವೆ ಮಾಡಿಸುವುದು ಉಂಟು. ಆದರೆ ಇಲ್ಲಿ ಹಾಗಲ್ಲ, ಇನ್ನೇನು ಸಾಯುವ ವಯಸ್ಸಿನ ವೃದ್ದನನ್ನು ಯುವತಿಯೊಬ್ಬಳು ಖುಷಿ ಖುಷಿಯಿಂದಲೇ ಮದುವೆಯಾಗಿದ್ದಾಳೆ. ಯುವತಿ ಬಲು ಸಂತಸದಿಂದಲೇ ವೃದ್ಧನ ಕೈ ಹಿಡಿದಿದ್ದು, ಇವರ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದೆ. ಜೊತೆಗೆ ನೆಟ್ಟಿಗರಿಂದ ಸಿಕ್ಕಾಪಟ್ಟೆ ಕಾಮೆಂಟ್‌ಗಳು ಕೇಳಿ ಬರುತ್ತಿವೆ.

ವಧುವಿಗೆ ಸಿಕ್ತು ಲೈಫೇ ಸೆಟಲ್ ಆಗುವಂತಹ ಉಡುಗೊರೆ
ವೃದ್ಧ ಬರೀ ಮದುವೆಯಾಗಿರುವ ವಿಚಾರ ಮಾತ್ರ ಇಲ್ಲಿ ಸುದ್ದಿಯಾಗಿದ್ದಲ್ಲ, ಮದುವೆಯ ನಂತರ ತನ್ನ ನವವಧುವಿಗೆ ಆತ ನೀಡಿದ ದುಬಾರಿ ಉಡುಗೊರೆಗಳು ಕೂಡ ಈಗ ಇಲ್ಲಿ ಸಾಕಷ್ಟು ಚರ್ಚೆಯಲ್ಲಿವೆ. ತನ್ನನ್ನು ಮದುವೆಯಾದ 19ರ ಹರೆಯದ ಹುಡುಗಿಗೆ ಆತ ದುಬಾರಿ ಐಷಾರಾಮಿ ರೂಲ್ಸ್ ರಾಯ್ಸ್ ಕಾರು ಹಾಗೂ 5 ಕೇಜಿ ಬಂಗಾರವನ್ನು ನೀಡಿದ್ದಾನೆ ಎಂದು ವರದಿಯಾಗಿದೆ.
ನೆಟ್ಟಿಗರ ಪ್ರತಿಕ್ರಿಯೆ ಏನು?
ಈ ನವಜೋಡಿಯ ವೀಡಿಯೋ ನೋಡಿದ ಅನೇಕರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಆಕೆಗೆ ಅವಳ ಭವಿಷ್ಯದ ಬಗ್ಗೆ ಅರಿವಿದೆ. ಅವಳಿಗೆ ಒಳ್ಳೆಯ ಭವಿಷ್ಯವಿದೆ. ಆಕೆ ತನ್ನ ಭವಿಷ್ಯವನ್ನು ಹಣ ಹಾಗೂ ಆತನ ವಯಸ್ಸಿನೊಂದಿಗೆ ಲೆಕ್ಕಾಚಾರ ಹಾಕಿ ಖುಷಿ ಖುಷಿಯಾಗಿದ್ದಾಳೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆಕೆ ಖುಷಿಯಾಗಿದ್ದಾಳೆ ಎಂದರೆ ನಾವು ಚಿಂತಿಸುವುದೇಕೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಹಣ ಖುಷಿ ನೀಡುತ್ತದೆ. ಹಣ ಎಲ್ಲವನ್ನೂ ಸಾಧ್ಯವಾಗಿಸುತ್ತದೆ. ಹಣದಿಂದ ಏನನ್ನು ಬೇಕಾದರೂ ಕೊಳ್ಳಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇದು ಎಐ ವೀಡಿಯೋ ಎಂದು ಕಾಮೆಂಟ್ ಮಾಡಿದ್ದಾರೆ.ಅದೇನೆ ಇರಲಿ ಗಂಡ ಹೆಂಡತಿ ನಡುವೆ ನಿಜವಾಗಿ ವಯಸ್ಸಿನ ಅಂತರ ಹೇಗಿರಬೇಕು ಎಂಬ ಬಗ್ಗೆ ಹಿಂದಿನಿಂದಲೂ ಚರ್ಚೆಯಾಗುತ್ತಲೇ ಇದೆ. ಕೆಲವರು ವಯಸ್ಸಿನ ಅಂತರ ಒಂದರೆಡು ವರ್ಷ ಇರಬೇಕು ಎಂದರೆ ಮತ್ತೆ ಕೆಲವರು ಮೂರು ನಾಲ್ಕು ವರ್ಷಗಳಿರಬೇಕು. ಒಂದೇ ವಯಸ್ಸಿನವರಾಗಿದ್ದರೆ ಇನ್ನೂ ಚೆನ್ನಾ ಸ್ನೇಹಿತರಾಗಿರಬಹುದು ಎಂದೆಲ್ಲಾ ಹೇಳುವುದನ್ನು ಕೇಳಬಹುದು. ಆದರೆ ಭಾರೀ ವಯಸ್ಸಿನ ಅಂತರದ ನಡುವೆಯೂ ಮದುವೆಯಾದ ಜೋಡಿಗಳು ಚೆನ್ನಾಗಿಯೇ ಇರುವ ಹಲವು ಉದಾಹರಣೆಗಳಿವೆ. ಅದೇನೆ ಇರಲಿ ಇಲ್ಲಿ ವಯಸ್ಸಿನ ಅಂತರಕ್ಕಿಂತ ವೃದ್ದನ ಶ್ರೀಮಂತಿಕೆಯ ಬಗ್ಗೆ ಭಾರಿ ಚರ್ಚೆಯಾಗ್ತಿದೆ.