ನಾವು ಟ್ಯಾಕ್ಸ್ ಪೇ ಮಾಡ್ತಿದ್ದೇವೆ, ರೋಡ್ ಸರಿ ಮಾಡ್ಕೊಡಿ

ಗುಂಡಿ.. ಗುಂಡಿ… ಗುಂಡಿ… ಈಗಂತೂ ಎಲ್ಲಾ ಕಡೆಗಳಲ್ಲೂ ಹದಗೆಟ್ಟ ರಸ್ತೆಗಳದ್ದೇ ದೊಡ್ಡ ರಗಳೆಯಾಗಿ ಹೋಗಿವೆ. ಕಳಪೆ ಕಾಮಗಾರಿಯ ಕಾರಣದಿಂದಾಗಿ ಹೊಂಡ-ಗುಂಡಿಗಳು ಬಿದ್ದು, ರಸ್ತೆಗಳು ಹದಗೆಟ್ಟಿದ್ದು, ಈ ರಸ್ತೆಗಳಲ್ಲಿ ವಾಹನಗಳನ್ನು ಚಲಾಯಿಸುವುದೇ ಜನರಿಗೊಂದು ದೊಡ್ಡ ತಲೆ ಬಿಸಿಯಾಗಿದೆ. ಹದಗೆಟ್ಟ ರಸ್ತೆಯ ಕಾರಣದಿಂದಾಗಿ ಸಂಚಾರಕ್ಕೆ ಅಡ್ಡಿಯಾಗುವುದು ಮಾತ್ರವಲ್ಲದೆ, ಅದೆಷ್ಟೋ ಅಮಾಯಕರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇಷ್ಟದ್ರೂ ಕೂಡ ಸಂಬಂಧಪಟ್ಟವರು ಇದಕ್ಕೆ ಕ್ಯಾರೇ ಅನ್ನುತ್ತಿಲ್ಲ. ಇದರಿಂದ ಬೇಸತ್ತ ಉಡುಪಿಯ (Udupi) ಜನ ಸರ್ಕಾರ ಹಾಗೂ ರಾಜಕೀಯ ಪಕ್ಷಗಳ ವಿರುದ್ಧ ರೊಚ್ಚಿಗೆದ್ದಿದ್ದಾರೆ. ನಾವು ಟ್ಯಾಕ್ಸ್ ಪೇ ಮಾಡ್ತಿದ್ದೇವೆ, ನೀವು ರಸ್ತೆ ಸರಿ ಮಾಡಿಕಕೊಡ್ಬೇಕು ಅಷ್ಟೆ ಇಲ್ಲದಿದ್ರೆ ಉಗ್ರ ಹೋರಾಟ ಮಾಡ್ತೀವಿ ಎಂದು ರಾಜಕೀಯ ಪಕ್ಷಗಳನ್ನು ಬೆಂಡೆತ್ತಿದ್ದಾರೆ. ಈ ಕುರಿತ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ರಾಜಕೀಯ ಪಕ್ಷಗಳನ್ನು ಬೆಂಡೆತ್ತಿದ ಉಡುಪಿಯ ಜನ:
ರಸ್ತೆ ಗುಂಡಿಗಳ ಸಮಸ್ಯೆಯಿಂದ ಬೇಸತ್ತ ಉಡುಪಿಯ ಜನ ರಾಜಕೀಯ ಪಕ್ಷಗಳನ್ನು ಬೆಂಡೆತ್ತಿದ್ದಾರೆ. ಇದು ನಮ್ಮ ಹಕ್ಕು, ನಮಗೆ ರಸ್ತೆ ಸರಿ ಮಾಡಿಕೊಡ್ಬೇಕು ಅಷ್ಟೇ ಎಂದು ಹೇಳಿದ್ದಾರೆ.
ಎಲ್ಲಾ ಪಕ್ಷದವರು ಒಂದು ಸಲ ಗಾಡಿ ತೆಗೆದುಕೊಂಡು ಈ ರೋಡಲ್ಲಿ ಬನ್ನಿ. ಇಲ್ಲಿನ ಅವಸ್ಥೆ ನಿಮ್ಗೂ ಗೊತ್ತಾಗುತ್ತದೆ. ನಾವೆಲ್ಲರೂ ಟ್ಯಾಕ್ಸ್ ಪೇ ಮಾಡ್ತಿದ್ದೇವೆ, ಹಾಗಾಗಿ ರೋಡನ್ನು ನೀವು ಸರಿ ಮಾಡಿಕೊಡ್ಬೇಕು, ನಾವು ವಿನಂತಿ ಮಾಡುವುದಲ್ಲ, ಇದು ನಮ್ಮ ಹಕ್ಕು, ಅದನ್ನು ಕೇಳ್ತಿದ್ದೇವೆ. ನಿಮ್ಮನ್ನು ಜನ ನಾಯಕರು ಅಂತ ಆರಿಸಿದ್ದು ನಾವು, ನಮ್ಮ ಗ್ರಾಮ ಊರನ್ನು ಅಭಿವೃದ್ಧಿ ಮಾಡುವುದು ನಿಮ್ಮ ಜವಾಬ್ದಾರಿ. ಈ ರೋಡಲ್ಲಿ ಹೋಗೋಕಾಗದೆ ನಾವು ಪರದಾಡ್ತಿದ್ದೇವೆ. ಯಾವುದೇ ಪಕ್ಷದವರಾಗಿರ್ಬೋದು ನಮ್ಗೆ ರೋಡ್ ಸರಿಯಾಗ್ಬೇಕು ಅಷ್ಟೆ. ಇಲ್ಲವೇ ಉಗ್ರ ಹೋರಾಟ ಮಾಡ್ತೇವೆ ಎಂದು ಕಿಡಿ ಕಾರಿದ್ದಾರೆ.
ಈ ಕುರಿತ ವಿಡಿಯೋವನ್ನು ಡಿ.ಜೆ ಸುಜಯ್ ಎಂಬವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡು, ಜನರೇ ಎಚ್ಚರಗೊಳ್ಳಿ, ನಿಮ್ಮ ಹಕ್ಕುಗಳಿಗಾಗಿ ಹೋರಾಡಿ, ಉತ್ತಮ ಗುಣಮಟ್ಟದ ರಸ್ತೆಗಳನ್ನು ಪಡೆಯುವುದು ನಮ್ಮ ಹಕ್ಕು ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಗುಂಡಿ ಬಿದ್ದ ರಸ್ತೆಯಲ್ಲಿ ನಿಂತು, ಈ ರಸ್ತೆ ಗುಂಡಿ ಸಮಸ್ಯೆಯನ್ನು ಬಗೆಹರಿಸಿಕೊಡಬೇಕು ಎಂದು ರಾಜಕೀಯ ಪಕ್ಷಗಳನ್ನು ಸರಿಯಾಗಿ ಬೆಂಡೆತ್ತಿರುವ ದೃಶ್ಯವನ್ನು ಕಾಣಬಹುದು.
ಸೆಪ್ಟೆಂಬರ್ 19 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಿಮ್ ಹಾಗೆ ಎಲ್ಲರೂ ಕೂಡ ಈ ಬಗ್ಗೆ ಧ್ವನಿ ಎತ್ತಬೇಕುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನೀವು ಉತ್ತಮ ಕಾರ್ಯ ಮಾಡಿದ್ದೀರಿ ಸಹೋದರʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಹಲವರು ಇವರ ದಿಟ್ಟ ಹೆಜ್ಜೆಗೆ ಭೇಷ್ ಎಂದಿದ್ದಾರೆ.
