ಮತದಾರರ ಪಟ್ಟಿ ಪರಿಷ್ಕರಣೆ: ಚುನಾವಣಾ ಆಯೋಗದ ಕ್ರಮ ಸಂವಿಧಾನಬದ್ಧ-ಸುಪ್ರೀಂಕೋರ್ಟ್

ನವದೆಹಲಿ: ಬಿಹಾರದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ತೆಗೆದುಕೊಂಡಿರುವ ಕ್ರಮ ಸರಿಯಾಗಿಯೇ ಇದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಚುನಾವಣಾ ಆಯೋಗ ತೆಗೆದುಕೊಂಡಿರುವ ಕ್ರಮ ಸಂವಿಧಾನದ ಅಡಿಯಲ್ಲಿ ಕಡ್ಡಾಯವಾಗಿದೆ. ಬಿಹಾರದಲ್ಲಿ 2003ರಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗಿತ್ತು ಎಂದು ಪೀಠ ಹೇಳಿದೆ. ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ನೀಡಿರುವ ಸೂಚನೆ ವಿರೋಧಿಸಿ ಹಲವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ಇಂದು ಅರ್ಜಿಗಳ ವಿಚಾರಣೆ ನಡೆಸಿರುವ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಚುನಾವಣಾ ಆಯೋಗ ಮಾಡುತ್ತಿರುವ ಕೆಲಸ ಸರಿ ಇದೆ.ಈ ಕ್ರಮ ಸಂವಿಧಾನದ ಆದೇಶಕ್ಕೆ ಅನುಗುಣವಾಗಿದೆ ಎಂದು ಹೇಳಿದೆ.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಇಷ್ಟು ತಡವಾಗಿ ಏಕೆ ಪ್ರಾರಂಭಿಸಿದೆ ಎಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗವನ್ನು ಕೇಳಿದೆ.ಅವರು ಸಂವಿಧಾನದ ಅಡಿಯಲ್ಲಿ ಏನುಮಾಡಬೇಕೋ ಅದನ್ನೇ ಮಾಡಿದ್ದಾರೆ, ಮಾಡಬಾರದ್ದನ್ನೇನು ಮಾಡಿಲ್ಲ ಎಂದು ಪೀಠ ಹೇಳಿದೆ. ಸುಪ್ರೀಂ ಕೋರ್ಟ್‌ನಲ್ಲಿ 10 ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಅದರಲ್ಲಿ ‘ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ ಎಂಬ ಸರ್ಕಾರೇತರ ಸಂಸ್ಥೆ ಕೂಡ ಒಂದು ಅರ್ಜಿಯನ್ನು ಸಲ್ಲಿಸಿದೆ.
ಜೂನ್ 24 ರಂದು, ಚುನಾವಣಾ ಆಯೋಗ ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ನಡೆಸಲು ಸೂಚನೆಗಳನ್ನು ನೀಡಿತು, ಇದು ಅನರ್ಹ ಹೆಸರುಗಳನ್ನು ತೆಗೆದುಹಾಕುವ ಮತ್ತು ಅರ್ಹ ನಾಗರಿಕರನ್ನು ಮಾತ್ರ ಸೇರಿಸುವುದನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಮತದಾರರ ಪರಿಶೀಲನೆಗಾಗಿ ಬೂತ್ ಮಟ್ಟದ ಅಧಿಕಾರಿಗಳು ಮನೆ-ಮನೆ ಸಮೀಕ್ಷೆಯ ಮೂಲಕ ಈ ಕಾರ್ಯವನ್ನು ನಡೆಸುತ್ತಿದ್ದಾರೆ.
