ವಿಷ್ಣುವರ್ಧನ್ ಸಮಾಧಿ ಮುಟ್ಟುಗೋಲು : ಅರಣ್ಯ ಅಧಿಕಾರಿಯ ಪತ್ರ ವೈರಲ್

ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣುವರ್ಧನ್ ಸಮಾಧಿಯನ್ನು ಕೆಡವಿದ ಬಳಿಕ ವಿವಾದ ಭುಗಿಲೆದ್ದಿದೆ. ಈ ಜಾಗದಲ್ಲಿ ಸ್ಮಾರಕ ನಿರ್ಮಾಣ ಆಗಬೇಕು ಎಂದು ವಿಷ್ಣುವರ್ಧನ್ ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಹೀಗಿರುವಾಗಲೇ ಅಭಿಮಾನ್ ಸ್ಟುಡಿಯೋ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಡಿಸಿಗೆ ಅರಣ್ಯ ಅಧಿಕಾರಿ ಪತ್ರ ಬರೆದಿದ್ದಾರೆ. ಈ ಪತ್ರ ವೈರಲ್ ಆಗಿದೆ. ಈ ಪತ್ರದಲ್ಲಿ ನಿಯಮ ಉಲ್ಲಂಘನೆ ಬಗ್ಗೆ ಬರೆಯಲಾಗಿದೆ.

ಆಗಸ್ಟ್ 22ರಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ ಅವರು ಈ ಬಗ್ಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಅವರು ನಿಯಮ ಉಲ್ಲಂಘನೆ ಬಗ್ಗೆ ಉಲ್ಲೇಖಿಸಿದ್ದಾರೆ. ಈ ವಿಚಾರದಲ್ಲಿ ಜಿಲ್ಲಾಧಿಕಾರಿ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಬಾಲಕೃಷ್ಣ ಅವರಿಗೆ 1970ರಲ್ಲಿ ಸ್ಟುಡಿಯೋ ನಿರ್ಮಾಣದ ಉದ್ದೇಶಕ್ಕೆ 20 ಎಕರೆ ಭೂಮಿಯನ್ನು 20 ವರ್ಷ ಲೀಸ್ಗೆ ನೀಡಾಗಿತ್ತು. ನಂತರ ಲೀಸ್ ಅವಧಿ ವಿಸ್ತರಣೆ ಮಾಡಿಕೊಳ್ಳಲಾಯಿತು. 2004ರಲ್ಲಿ ಆರ್ಥಿಕ ಸಂಕಷ್ಟದ ನೆಪ ಹೇಳಿ ಬಾಲಕೃಷ್ಣ ಮಕ್ಕಳಾದ ಶ್ರೀನಿವಾಸ್ ಹಾಗೂ ಗಣೇಶ್ ಜಿಲ್ಲಾಧಿಕಾರಿಗಳ ಬಳಿ 10 ಎಕರೆ ಮಾರಲು ಒಪ್ಪಿಗೆ ಕೇಳಿದ್ದರು ಎನ್ನಲಾಗಿದೆ. ಜಿಲ್ಲಾಧಿಕಾರಿಗಳ ವಿಶೇಷ ಅಧಿಕಾರ ಬಳಸಿ ಇದ್ದನ್ನು ಮಾರಲಾಯಿತು ಎನ್ನಲಾಗಿದೆ. ಮಾರಾಟದಿಂದ ಬಂದ ಹಣವನ್ನು ಸ್ಟುಡಿಯೋ ಅಭಿವೃದ್ಧಿಗೆ ಮಾತ್ರ ಬಳಕೆ ಮಾಡಿಕೊಳ್ಳೋದಾಗಿ ಅವರು ಸರ್ಕಾರಕ್ಕೆ ಹೇಳಿದ್ದರು.
ಆದರೆ, ಈವರೆಗೆ ಸ್ಟುಡಿಯೋ ಯಥಾ ಸ್ಥಿತಿಯಲ್ಲೇ ಇದೆ. ಈವರೆಗೆ ಇದರ ಅಭಿವೃದ್ಧಿ ಆಗಿಲ್ಲ. ಈಗ ಬಾಲಕೃಷ್ಣ ಮೊಮ್ಮಗ ಕಾರ್ತಿಕ್ ಅವರು ಈ ಜಮೀನನ್ನು ಮಾರಲು ಪ್ಲ್ಯಾನ್ ಮಾಡಿದ್ದರು. 1 ಎಕರೆಗೆ 14 ಕೋಟಿ ರೂಪಾಯಿಯಂತೆ ಮಾರಲು ಪ್ಲ್ಯಾನ್ ನಡೆದಿತ್ತು. ಈ ವಿಚಾರ ಅರಣ್ಯಾಧಿಕಾರಿಗೆ ಗೊತ್ತಾಗಿದೆ. ಹೀಗಾಗಿ, ಇದನ್ನು ವಶಕ್ಕೆ ಪಡೆಯುವಂತೆ ಅವರು ಜಿಲ್ಲಾಧಿಕಾರಿಗಳಿಗೆ ಕೋರಿದ್ದಾರೆ.
ಸದ್ಯ ವಿಷ್ಣುವರ್ಧನ್ ಅಭಿಮಾನಿಗಳು ಸ್ಟುಡಿಯೋದ 10 ಗುಂಟೆ ಜಾಗವನ್ನು ತಮಗೆ ನೀಡುವಂತೆ ಕೋರುತ್ತಿದ್ದಾರೆ. ವಿಷ್ಣುವರ್ಧನ್ ಸಮಾಧಿ ಜಾಗದಲ್ಲಿ ಸ್ಮಾರಕ ನಿರ್ಮಾಣ ಮಾಡುವ ಪ್ಲ್ಯಾನ್ನಲ್ಲಿ ಅಭಿಮಾನಿಗಳಿದ್ದಾರೆ.
