ವೈರಲ್ ವಿಡಿಯೋ ಸುಳ್ಳು: ಕರ್ನಾಟಕದಲ್ಲಿ ವೃದ್ಧೆಗೆ ಹಲ್ಲೆ ನಡೆದಿದೆ ಎಂಬ ಸುದ್ದಿ ವಾಸ್ತವವಲ್ಲ

ಬೆಂಗಳೂರು : ಒಬ್ಬ ವ್ಯಕ್ತಿ ವೃದ್ಧ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ಒಂದು ಮನಕಲಕುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲ್ಪಡುತ್ತಿದೆ. ಈ ಘಟನೆ ಕಾಂಗ್ರೆಸ್ (Congress) ಸರ್ಕಾರ ಇರುವ ಕರ್ನಾಟಕದ್ದು ಎಂದು ಕೂಡ ಹೇಳಲಾಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಒಬ್ಬ ವೃದ್ಧ ಮಹಿಳೆಯನ್ನು ಮನೆಯಿಂದ ಹೊರಗೆ ಎಳೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಇದಲ್ಲದೆ, ಆ ಮಹಿಳೆಯ ಮೇಲೆ ಮಣ್ಣು ಎರಚುತ್ತಾ, ಕಪಾಳಮೋಕ್ಷ ಮಾಡುತ್ತಿರುವುದನ್ನು ಸಹ ಕಾಣಬಹುದು.

ಫೇಸ್ಬುಕ್ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡು, ‘‘ಕಾಂಗ್ರೆಸ್ ಆಡಳಿತದ ಕರ್ನಾಟಕದಲ್ಲಿ ನಡೆದ ಘಟನೆ, 65 ವರ್ಷದ ಮುಲ್ಲಾ ತನ್ನ ಕಾಮತೃಷೆಯನ್ನು ಪೂರೈಸಿಕೊಳ್ಳಲು ತನ್ನ 42 ವರ್ಷದ ಮಧ್ಯವಯಸ್ಕ ಸಹೋದರಿಯನ್ನು ಮದುವೆಯಾದನು, ನಂತರ ತನ್ನ 62 ವರ್ಷದ ಮೊದಲ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಯನ್ನು ಹೊಡೆದು ಜೀವಂತವಾಗಿ ಹೂಳಲು ಪ್ರಯತ್ನಿಸಿದನು, ಆ ಮಹಿಳೆ ಅಳುತ್ತಾ ಕಿರುಚುತ್ತಿದ್ದಳು, ಎಲ್ಲರೂ ವೀಡಿಯೊಗಳನ್ನು ಮಾಡುವಲ್ಲಿ ನಿರತರಾಗಿದ್ದರು, ಯಾರೂ ಅವಳನ್ನು ಉಳಿಸಲು ಹೋಗಲಿಲ್ಲ, ಘಟನೆಯ ಲೈವ್ ವಿಡಿಯೋವನ್ನು ವೀಕ್ಷಿಸಿ’’ ಎಂದು ಬರೆದುಕೊಂಡಿದ್ದಾರೆ.
ಇದು ಬಾಂಗ್ಲಾದೇಶದ ವಿಡಿಯೋ:
ಈ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೋದಿಸಿದಾಗ ಇದು ಕರ್ನಾಟಕ ಅಥವಾ ಭಾರತಕ್ಕೆ ಸಂಬಂಧ ಪಟ್ಟ ವಿಡಿಯೋವೇ ಅಲ್ಲ, ಇದು ಬಾಂಗ್ಲಾದೇಶದಲ್ಲಿ ನಡೆದ ಘಟನೆ ಆಗಿದೆ ಎಂಬುದು ಕಂಡುಬಂದಿದೆ. ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ವೈರಲ್ ವಿಡಿಯೋದ ಪ್ರಮುಖ ಚೌಕಟ್ಟುಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ಅದು ಡೈಲಿ ಜುಗಾಂಟರ್ ಎಂಬ ಬಾಂಗ್ಲಾದೇಶದ ಯೂಟ್ಯೂಬ್ ಚಾನೆಲ್‌ನಲ್ಲಿ ಕಂಡುಬಂದಿದೆ. ಇಲ್ಲಿ ಅದನ್ನು ಆಗಸ್ಟ್ 10, 2025 ರಂದು ಅಪ್‌ಲೋಡ್ ಮಾಡಲಾಗಿದೆ. ವಿಡಿಯೋದೊಂದಿಗೆ ನೀಡಲಾದ ಮಾಹಿತಿಯು ಅದು ಬಾಂಗ್ಲಾದೇಶದ ಶೆರ್ಪುರದಿಂದ ಬಂದಿದೆ ಎಂದು ಹೇಳುತ್ತದೆ.
