ನಿಕ್ಕಿ ಮೇಲೆ 1 ತಿಂಗಳಿಂದ ಯೋಜಿತ ದಾಳಿ – ಜೀವಂತ ಸುಡುವ ಭಯಾನಕ ಹ*ತ್ಯೆ

ನೊಯ್ಡಾ: ವರದಕ್ಷಿಣೆ ಕಿರುಕುಳದಿಂದ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ನಿಕ್ಕಿಯನ್ನು ಜೀವಂತವಾಗಿ ಸುಟ್ಟುಹಾಕಿದ ಪ್ರಕರಣದಲ್ಲಿ ಈಗ ಮತ್ತೊಂದು ವಿಷಯ ಬೆಳಕಿಗೆ ಬಂದಿದೆ. ಪೊಲೀಸ್ ತನಿಖೆಯಲ್ಲಿ ವಿಪಿನ್ ಒಂದು ತಿಂಗಳಿನಿಂದ ನಿಕ್ಕಿಯನ್ನು ಕೊಲ್ಲಲು ಪ್ಲಾನ್ ಮಾಡುದ್ದನೆಂದು ತಿಳಿದುಬಂದಿದೆ. ಇದಕ್ಕಾಗಿ ಅವನು ದೆಹಲಿಗೆ ಹೋಗಿ ಅಲ್ಲಿಂದ ರಾಸಾಯನಿಕಗಳನ್ನು ಖರೀದಿಸಿ, ನಿಕ್ಕಿಯ ಮೇಲೆ ಅದನ್ನು ಸಿಂಪಡಿಸಿ ಅವಳನ್ನು ಜೀವಂತವಾಗಿ ಸುಟ್ಟುಹಾಕಿದ್ದ ಎಂಬುದು ಗೊತ್ತಾಗಿದೆ.

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಸಜೀವ ದಹನಗೊಂಡ ನಿಕ್ಕಿ ಎಂಬ ಮಹಿಳೆಯ ಕೊಲೆ ಪ್ರಕರಣದಲ್ಲಿ ಪೊಲೀಸರು ಇನ್ನೂ ಇಬ್ಬರನ್ನು ಬಂಧಿಸಿದ್ದಾರೆ. ಈ ನಡುವೆ, ಸಿರ್ಸಾ ಟೋಲ್ ಪ್ಲಾಜಾ ಬಳಿ ತಲೆಮರೆಸಿಕೊಂಡಿದ್ದ ನಿಕ್ಕಿಯ ಭಾವ ರೋಹಿತ್ ಭಾಟಿ ಮತ್ತು ಮಾವ ಸತ್ವೀರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ನಿಕ್ಕಿಯ ಅತ್ತೆ ದಯಾವತಿಯನ್ನು ಭಾನುವಾರ ಸಂಜೆ ಬಂಧಿಸಲಾಗಿದ್ದು, ಪೊಲೀಸರು ಈಗಾಗಲೇ ಪ್ರಮುಖ ಆರೋಪಿ ವಿಪಿನ್ ನನ್ನು ಬಂಧಿಸಿ ನ್ಯಾಯಾಲಯದ ಆದೇಶದ ನಂತರ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಭಾನುವಾರ ಪೊಲೀಸರೊಂದಿಗಿನ ಎನ್‌ಕೌಂಟರ್‌ನಲ್ಲಿ ವಿಪಿನ್ ಕಾಲಿಗೆ ಗುಂಡು ಹಾರಿಸಲಾಯಿತು. ಇದಾದ ನಂತರ ನ್ಯಾಯಾಲಯದ ಆದೇಶದ ಮೇರೆಗೆ ಆ ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು. ಈಗ ಈ ಪ್ರಕರಣದಲ್ಲಿ ಮತ್ತೊಂದು ವಿಷಯ ಬಹಿರಂಗವಾಗಿದ್ದು, ನಿಕ್ಕಿ ಮತ್ತು ಆಕೆಯ ತಂಗಿ ಕಾಂಚನ್ ಜೀವನೋಪಾಯಕ್ಕಾಗಿ ಪಾರ್ಲರ್ ನಡೆಸುತ್ತಿದ್ದರು. ಇದು ಆಕೆಯ ಅತ್ತೆ-ಮಾವನಿಗೆ ಇಷ್ಟವಿರಲಿಲ್ಲ. ಇದೇ ವಿಷಯಕ್ಕೆ ಜಗಳವಾಗುತ್ತಿತ್ತು. ಆಕೆಯ ಗಂಡ ವಿಪಿನ್ ಮತ್ತು ಅವನ ಸಹೋದರ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ವಿಪಿನ್ ತನ್ನ ಹೆಂಡತಿ ನಿಕ್ಕಿ ಗಳಿಸಿದ ಹಣವನ್ನು ಕದಿಯುತ್ತಿದ್ದ.
ವಿಪಿನ್ಗೆ ಯಾವುದೇ ಉದ್ಯೋಗವಿಲ್ಲದಿದ್ದರಿಂದ ಅವನ ಬಳಿ ಹಣ ಇರಲಿಲ್ಲ. ಹೀಗಾಗಿ, ಆತ ಹೆಂಡತಿಗೆ ವರದಕ್ಷಿಣೆ ತರಲು ಒತ್ತಾಯಿಸುತ್ತಿದ್ದ. ಮದುವೆಯಾದಾಗಿನಿಂದ ನಿಕ್ಕಿಯ ತಂದೆ ಹಲವು ಬಾರಿ ಅಳಿಯನಿಗೆ ಹಣ ನೀಡಿದ್ದರು. ನಿಮ್ಮ ಮರ್ಸಿಡಿಸ್ ಅನ್ನು ನಮಗೆ ಕೊಡಿ ಎಂದು ಆತ ಮಾವನಿಗೆ ಒತ್ತಾಯಿಸುತ್ತಿದ್ದ. ಈ ಬಗ್ಗೆ ಮಾತನಾಡಿರುವ ನಿಕ್ಕಿಯ ತಂದೆ, ನನ್ನ ಅಳಿಯನಿಗೆ ಯಾವುದೇ ಕೆಲಸವಿಲ್ಲದ ಕಾರಣ ನಾನು ನನ್ನ ಮಗಳಿಗೆ ಬ್ಯೂಟಿ ಪಾರ್ಲರ್ ತೆರೆಯಲು ಸಹಾಯ ಮಾಡಿದೆ. ನಂತರ ಅವನು ಪಾರ್ಲರ್‌ನಿಂದ ಹಣವನ್ನು ಕದಿಯಲು ಪ್ರಾರಂಭಿಸಿದನು. ಅವನು ನನ್ನ ಮರ್ಸಿಡಿಸ್ ಕಾರು ಅಥವಾ 60 ಲಕ್ಷ ರೂ.ಗಳನ್ನು ನೀಡುವಂತೆ ಒತ್ತಡ ಹೇರಿದ್ದ ಎಂದಿದ್ದಾರೆ.
ಅಕ್ಕ-ತಂಗಿಯರಾದ ನಿಕ್ಕಿ ಮತ್ತು ಕಾಂಚನ್ 2016ರ ಡಿಸೆಂಬರ್ನಲ್ಲಿ ಸಿರ್ಸಾದಲ್ಲಿ ಒಂದೇ ಕುಟುಂಬಕ್ಕೆ ವಿವಾಹವಾಗಿದ್ದರು. ನಿಕ್ಕಿ ವಿಪಿನ್ ಅವರನ್ನು ವಿವಾಹವಾದಳು, ಕಾಂಚನ್ ವಿಪಿನ್ನ ಅಣ್ಣ ರೋಹಿತ್ ಭಾಟಿ ಅವರನ್ನು ವಿವಾಹವಾದಳು. ಮದುವೆಯಾದ ಎರಡು ವರ್ಷಗಳ ನಂತರ, ಅವರ ಅತ್ತೆ-ಮಾವಂದಿರು ವರದಕ್ಷಿಣೆಗಾಗಿ ಬೇಡಿಕೆ ಇಡಲು ಪ್ರಾರಂಭಿಸಿದರು. ನಿಕ್ಕಿಯ ತವರು ಮನೆಯಲ್ಲಿ ಐಷಾರಾಮಿ ಕಾರುಗಳಿದ್ದುದರಿಂದ ಅವರು ಅವುಗಳಿಗೆ ಬೇಡಿಕೆ ಇಟ್ಟಿದ್ದರು. ಇಬ್ಬರು ಅಳಿಯಂದಿರಿಗೂ ಉದ್ಯೋಗ ಇಲ್ಲದಿದ್ದರಿಂದ ತಾವೇ 8 ಲಕ್ಷ ರೂ. ಹಾಕಿ ನಿಕ್ಕಿ ಮತ್ತು ಕಾಂಚನ್ ಅವರ ಅಪ್ಪ ಬ್ಯೂಟಿ ಪಾರ್ಲರ್ ನಿರ್ಮಿಸಿಕೊಟ್ಟಿದ್ದರು. ಇದರಿಂದ ತಮ್ಮ ಹೆಣ್ಣುಮಕ್ಕಳು ತಮ್ಮ ಹಣವನ್ನು ತಾವೇ ದುಡಿದುಕೊಳ್ಳಲಿ ಎಂಬ ಉದ್ದೇಶ ಅವರದ್ದಾಗಿತ್ತು. ಆದರೆ, ಅವರ ಅತ್ತೆ-ಮಾವ ಇದನ್ನು ವಿರೋಧಿಸಿದ್ದರು. ಈ ವರ್ಷದ ಫೆಬ್ರವರಿಯಲ್ಲಿ ಅವರು ಸಂಪೂರ್ಣ ಪಾರ್ಲರ್ ಅನ್ನು ಕೆಡವಿದರು. ಕೊನೆಗೆ ನಿಕ್ಕಿ ಮತ್ತು ಕಾಂಚನ್ ಸಿರ್ಸಾದಲ್ಲಿರುವ ತಮ್ಮ ಮನೆಯ ಮೂರನೇ ಮಹಡಿಯಲ್ಲಿ ಪಾರ್ಲರ್ ಅನ್ನು ನಡೆಸುತ್ತಿದ್ದರು. ಅವರ ಬ್ಯೂಟಿ ಪಾರ್ಟರ್ನ ಇನ್ಸ್ಟಾಗ್ರಾಂ ಪೇಜಿಗೆ ಲಕ್ಷಾಂತರ ಜನ ವ್ಯೂವರ್ಸ್ ಇದ್ದರು.
ಆಗಸ್ಟ್ 21ರಂದು ನಿಕ್ಕಿಯ ಪತಿ ವಿಪಿನ್ ಮತ್ತು ಅತ್ತೆ ಒಟ್ಟಾಗಿ ಅವಳನ್ನು ಜೀವಂತವಾಗಿ ಸುಟ್ಟುಹಾಕಿದರು. ನಂತರ ನಿಕ್ಕಿ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ನಿಕ್ಕಿಗೆ ನ್ಯಾಯ ಸಿಗಬೇಕೆಂದು ನಿಕ್ಕಿಯ ಕುಟುಂಬ ಧರಣಿ ಕುಳಿತಿದ್ದು, ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸುತ್ತಿದೆ. ನಿಕ್ಕಿಯನ್ನು ಕೊಲ್ಲಲು ಬಹಳ ದಿನಗಳಿಂದ ಪಿತೂರಿ ರೂಪಿಸಲಾಗುತ್ತಿತ್ತು. ವಿಪಿನ್ ಸುಮಾರು ಒಂದು ತಿಂಗಳಿನಿಂದ ನಿಕ್ಕಿಯನ್ನು ಕೊಲ್ಲಲು ಯೋಜಿಸುತ್ತಿದ್ದನೆಂದು ಈಗ ಬೆಳಕಿಗೆ ಬಂದಿದೆ. ಇದಕ್ಕಾಗಿ ಅವನು ದೆಹಲಿಯಿಂದ ಟಿನ್ನರ್ ಅನ್ನು ತಂದಿದ್ದ. ನಿಕ್ಕಿಯ ಮೇಲೆ ಟಿನ್ನರ್ ಸುರಿದು ಜೀವಂತವಾಗಿ ಸುಟ್ಟು ಹಾಕಲಾಗಿದೆ ಎಂದು ಪೊಲೀಸ್ ತನಿಖೆಯಲ್ಲಿ ದೃಢಪಟ್ಟಿದೆ.
ಪೊಲೀಸ್ ತನಿಖೆಯಲ್ಲಿ ವಿಪಿನ್ ನಿಕ್ಕಿಯನ್ನು ಹಠಾತ್ತನೆ ಅಥವಾ ಕೋಪದಿಂದ ಕೊಂದಿಲ್ಲ ಎಂದು ತಿಳಿದುಬಂದಿದೆ, ಆದರೆ ಅವನು ಒಂದು ತಿಂಗಳಿನಿಂದ ಇದಕ್ಕಾಗಿ ಸಂಚು ರೂಪಿಸುತ್ತಿದ್ದನು. ವಿಪಿನ್ ಒಂದು ತಿಂಗಳ ಹಿಂದೆ ದೆಹಲಿಗೆ ಹೋಗಿ ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ಅಂಗಡಿಯಿಂದ ಟಿನ್ನರ್ ಖರೀದಿಸಿದನು. ಇದಾದ ನಂತರ, ಆಗಸ್ಟ್ 21ರಂದು ವಿಪಿನ್ ತನ್ನ ತಾಯಿಯೊಂದಿಗೆ ದೆಹಲಿಯಿಂದ ತಂದಿದ್ದ ಟಿನ್ನರ್ ಅನ್ನು ನಿಕ್ಕಿಯ ಮೇಲೆ ಸಿಂಪಡಿಸಿ, ಲೈಟರ್‌ನಿಂದ ಬೆಂಕಿ ಹಚ್ಚಿದನು. ನಿಕ್ಕಿಯನ್ನು ಸುಡುತ್ತಿರುವಾಗ ಅವಳ ಮಗ ಕೂಡ ಅಲ್ಲೇ ಇದ್ದನು. ಅವನು ಅದನ್ನೆಲ್ಲ ನೋಡಿದ್ದು, ಕೊನೆಗೆ ಆತನೇ ತನ್ನ ತಾಯಿಯ ಕೊಲೆಯ ಬಗ್ಗೆ ಪೊಲೀಸರಿಗೆ ಸಾಕ್ಷಿ ಹೇಳಿದ್ದನು. ಅಮ್ಮಾ ಎಂದು ಅಳುತ್ತಿದ್ದ ಮಗನನ್ನು ರೂಂನಲ್ಲಿ ಕೂಡಿಹಾಕಿದ ವಿಪಿನ್ ಹೆಂಡತಿಗೆ ಬೆಂಕಿ ಹಚ್ಚಿದ್ದ. ಆಕೆ ಹೊತ್ತಿ ಉರಿಯುವ ಬೆಂಕಿಯಲ್ಲೇ ಮನೆಯಿಂದ ಹೊರಗೆ ಓಡಿಬಂದಿದ್ದಳು. ಆಕೆಯ ತಂಗಿ ಕಾಂಚನ್ ಆಕೆಯನ್ನು ಕಾಪಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅವಳಿಗೂ ವಿಪಿನ್ ಹಾಗೂ ಆಕೆಯ ಅಮ್ಮ ಹೊಡೆದು ಹಿಂಸೆ ನೀಡಿದರು.
