ಗ್ರಾಮಸ್ಥರನ್ನು ಹೆದರಿಸುತ್ತಿದ್ದ ಬುಡುಬುಡಿಕೆ ಜನಾಂಗಕ್ಕೆ ಗ್ರಾಮಸ್ಥರಿಂದಲೇ ಚಳಿ ಬಿಡಿಸಿದ ಘಟನೆ

ಮಂಡ್ಯ: ರಾತ್ರಿ ವೇಳೆ ಗ್ರಾಮಕ್ಕೆ ಬಂದು ಜನರಿಗೆ ಶಾಸ್ತ್ರ ಹೇಳಿ ಭಯ ಹುಟ್ಟಿಸುತ್ತಿದ್ದ ಬುಡುಬುಡಿಕೆ ಜನರಿಗೆ ಗ್ರಾಮಸ್ಥರೇ ಚಳಿ ಬಿಡಿಸಿದ ಘಟನೆ ಮಂಡ್ಯ ತಾಲ್ಲೂಕಿನ ಕೀಲಾರ ಗ್ರಾಮದಲ್ಲಿ ನಡೆದಿದೆ.

ಬುಡುಬುಡಿಕೆ ಜನಾಂಗದ ಹಲವರು ರಾತ್ರಿ ವೇಳೆ ಗ್ರಾಮದಲ್ಲಿ ಬೀದಿಯಲ್ಲಿ ಸಂಚರಿಸಿ ಭಯ ಹುಟ್ಟಿಸುವ ರೀತಿಯೇ ಶಾಸ್ತ್ರ ಹೇಳುತ್ತಿದ್ದರು.
ಇವರ ಭಯ ಹುಟ್ಟಿಸುವ ಭವಿಷ್ಯ ಹಾಗೂ ಶಾಸ್ತ್ರ ಕೇಳಿ ಸುತ್ತಮುತ್ತಲ ಊರಿನ ಜನರು ಆತಂಕಗೊಂಡಿದ್ದರು. ಒಂಟಿ ಮಹಿಳೆಯರಿದ್ದ ಮನೆಗೆ ಹೋಗಿ ವಿಚಿತ್ರ ರೀತಿಯ ಭಯ ಹುಟ್ಟಿಸುವ ಶಾಸ್ತ್ರ ಹೇಳಿ ಹಣ ಪಡೆಯುತ್ತಿದ್ದರು. ಗ್ರಾಮದ ಮುಖ್ಯ ಜಾಗದಲ್ಲೇ ನಿಂತು ಗ್ರಾಮಕ್ಕೆ ಆಪತ್ತು ಬರಲಿದೆ ಎಂದು ಹೇಳಿ ಭಯದ ವಾತಾವರಣ ಸೃಷ್ಟಿಸಿದ್ದರು. ಬುಡುಬುಡಿಕೆಯವರ ಶಾಸ್ತ್ರದಿಂದ ಕಂಗಾಲಾಗಿದ್ದ ಗ್ರಾಮಸ್ಥರು, ಅವರು ತಂಗಿದ್ದ ಊರ ಹೊರಗಿನ ಜಾಗಕ್ಕೆ ಹೋಗಿ ಎಚ್ಚರಿಕೆ ನೀಡಿದ್ದಾರೆ. ಗ್ರಾಮಸ್ಥರ ತರಾಟೆ ಬಳಿಕ ಕ್ಷಮೆ ಕೋರಿದ ಬುಡುಬುಡಿಕೆಯವರು, ಮತ್ತೊಮ್ಮೆ ಗ್ರಾಮಕ್ಕೆ ಬಂದು ಈ ರೀತಿ ಮಾಡುವುದಿಲ್ಲ ಎಂದು ಕ್ಷಮೆಯಾಚಿಸಿದ್ದಾರೆ. ಗ್ರಾಮಕ್ಕೆ ಇನ್ನೊಮ್ಮೆ ಗ್ರಾಮಕ್ಕೆ ಬಂದು ಈ ರೀತಿ ಉಪದ್ರವ ನೀಡಿದ್ರೆ ಪೊಲೀಸರಿಗೆ ಹಿಡಿದುಕೊಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.