ಬ್ಯಾಂಕ್‌ಗಳು ಮುಟ್ಟುಗೋಲು ಹಾಕಿದ ಆಸ್ತಿಗಳ ಲೆಕ್ಕ ಕೊಡಿ: ಹೈಕೋರ್ಟ್‌ಗೆ ವಿಜಯ್ ಮಲ್ಯ ಅರ್ಜಿ

ಬೆಂಗಳೂರು: ತನ್ನ ಸಾಲದ ಸಂಬಂಧ ಬ್ಯಾಂಕ್‌ಗಳು (Banks) ಈವರೆಗೆ ಎಷ್ಟು ಆಸ್ತಿಗಳನ್ನು ಮುಟ್ಟುಗೋಲು ಹಾಕಿವೆ? ಅದರ ಲೆಕ್ಕ ನೀಡುವಂತೆ ಕೋರಿ ಹೈಕೋರ್ಟ್‌ಗೆ (High Court) ವಿಜಯ್ ಮಲ್ಯ (Vijay Mallya) ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ನಡೆಯಿತು.

ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಲಲಿತಾ ಕೆನ್ನಿಗಂಟಿಯವರ ಏಕಸದಸ್ಯ ಪೀಠ, ನೀವು ಕಂಪನಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿಲ್ಲ ಯಾಕೆ? ರಿಟ್ ಅರ್ಜಿಯಲ್ಲಿ ಬ್ಯಾಂಕ್‌ಗಳಿಂದ ಲೆಕ್ಕಪತ್ರ ಹೇಗೆ ಕೇಳುತ್ತೀರಿ ಎಂದು ಮಲ್ಯ ಪರ ಹಿರಿಯ ವಕೀಲ ಸಜನ್ ಪೂವಯ್ಯಗೆ ಪ್ರಶ್ನೆ ಮಾಡಿತು.
ಸಾಲ ವಸೂಲಿ ಪ್ರಾಧಿಕಾರ ಹೈಕೋರ್ಟ್ ಅಧೀನದಲ್ಲಿ ಬರುತ್ತದೆ. ಬ್ಯಾಂಕ್‌ನವರು ಒಂದು ಹೇಳುತ್ತಾರೆ, ಅಫಿಷಿಯಲ್ ಲಿಕ್ವಿಡೇಟರ್ ಮತ್ತೊಂದು ಹೇಳುತ್ತಾರೆ. ಒಂದು ಕಾಲದಲ್ಲಿ ಯುಬಿಹೆಚ್‌ಎಲ್ (UBHL)ಕಂಪನಿ ವಿಶ್ವದಲ್ಲಿ ಪ್ರಸಿದ್ಧ ಕಂಪನಿಯಾಗಿತ್ತು. ಡಾ. ವಿಜಯ್ ಮಲ್ಯ ಯುಬಿಹೆಚ್ ಎಲ್ ನಿರ್ದೇಶಕರಾಗಿದ್ದರು. ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸುವುದು ಅವರ ಸಾಂವಿಧಾನಿಕ ಹಕ್ಕೆಂದು ಸಜ್ಜನ್ ಪೂವಯ್ಯ ವಾದ ಮಂಡಿಸಿದರು.
ಮದ್ಯಪ್ರವೇಶಿಸಿದ ಹೈಕೋರ್ಟ್, ಸುಪ್ರೀ ಕೋರ್ಟ್ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಮಲ್ಯ ಹಾಜರಾಗಿಲ್ಲ. ದೇಶದ ವಿವಿಧೆಡೆ ನಡೆದಿರುವ ಕೋರ್ಟ್ ವಿಚಾರಣೆಗೆ ಮಲ್ಯ ಹಾಜರಾಗಿಲ್ಲ. ಹೀಗಿರುವಾಗ ನೀವು ರಿಟ್ ಸಲ್ಲಿಸುವ ಹಕ್ಕನ್ನು ಹೇಗೆ ಮಂಡಿಸುತ್ತೀರಿ ಎಂದು ಪ್ರಶ್ನೆ ಮಾಡಿತು
ವಿಜಯ್ ಮಲ್ಯ ಲಂಡನ್ ಕೋರ್ಟ್ ನ ಕಾನೂನು ಪ್ರಕ್ರಿಯೆಗೆ ಒಳಪಟ್ಟಿದ್ದು, ಮಲ್ಯ ಅವರು 6,200 ಕೋಟಿ ರೂ. ಸಾಲ ಕೊಡಬೇಕಿತ್ತು, 14,000 ಕೋಟಿ ರೂ. ವಸೂಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಗೆ ತಿಳಿಸಿದ್ದಾರೆ. ಸಾಲ ವಸೂಲಾತಿ ಅಧಿಕಾರಿ 10,200 ಕೋಟಿ ರೂ. ವಸೂಲಾಗಿದೆ ಎಂದಿದ್ದಾರೆ. ಸಂಪೂರ್ಣ ಸಾಲ ತೀರಿದ್ದರೂ ಈಗಲೂ ಪ್ರಕ್ರಿಯೆ ಮುಂದುವರಿಸಲಾಗುತ್ತಿದೆ. ಹೀಗಾಗಿ ಸಾಲ ವಸೂಲಿಯಾದ ಲೆಕ್ಕಪತ್ರ ಕೋರಿ ಡಾ. ವಿಜಯ್ ಮಲ್ಯ ಅರ್ಜಿ ಸಲ್ಲಿಸಿದ್ದಾರೆ ಸಂತಾ ಸಜ್ಜನ್ ಪೂವಯ್ಯ ವಾದ ಮಂಡಿಸಿದರು.
ಬ್ಯಾಂಕ್ ಗಳ ಪರ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ ಪ್ರತಿವಾದ ಮಂಡಿಸಿ, ಮಲ್ಯ ದೇಶ ತೊರೆದು ದೇಶಭ್ರಷ್ಟರಾಗಿದ್ದಾರೆ. ಮಲ್ಯ ಮುಗ್ದರಾಗಿದ್ದರೆ ಭಾರತಕ್ಕೆ ಮರಳಿ ನ್ಯಾಯಾಂಗದ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಿತ್ತು. ತಮಗೆ ಬೇಕಾದಾಗ ಮಾತ್ರ ಕೋರ್ಟ್ ಮುಂದೆ ಬರುತ್ತಾರೆಂದು ಆಕ್ಷೇಪಿಸಿದರು.
ಆಕ್ಷೇಪಣೆ ಸಲ್ಲಿಸುವಂತೆ ಬ್ಯಾಂಕ್‌ಗಳ ಪರ ವಕೀಲರಿಗೆ ನ್ಯಾಯಮೂರ್ತಿಗಳು ಸೂಚನೆ ನೀಡಿ ನ.12 ಕ್ಕೆ ವಿಚಾರಣೆ ಮುಂದೂಡಿದರು.