ರಾಷ್ಟ್ರೀಯ ಹೆದ್ದಾರಿ 44ರಲ್ಲಿ ವಿಜಯ್ ದೇವರಕೊಂಡ ಕಾರಿಗೆ ಹಾನಿ: ಅದೃಷ್ಟವಶಾತ್ ನಟನಿಗೆ ಯಾವುದೇ ಗಾಯಗಳಾಗಿಲ್ಲ

ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರು ನಟಿ ರಶ್ಮಿಕಾ ಮಂದಣ್ಣ (Rashmika Mandanna) ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಕೇಳಿಬಂದಿತ್ತು. ಅದರ ಬೆನ್ನಲ್ಲೇ ಒಂದು ಶಾಕಿಂಗ್ ಘಟನೆ ನಡೆದಿದೆ. ವಿಜಯ್ ದೇವರಕೊಂಡ (Vijay Deverakonda) ಅವರು ಚಲಿಸುತ್ತಿದ್ದ ಕಾರು ಅಪಘಾತಕ್ಕೆ ಒಳಗಾಗಿದೆ. ರಾಷ್ಟ್ರೀಯ ಹೆದ್ದಾರಿ 44ರಲ್ಲಿ ವರಸಿದ್ಧಿ ವಿನಾಯಕ ಕಾಟನ್ ಮಿಲ್ ಸಮೀಪ ಈ ಅಪಘಾತ (Vijay Deverakonda Car Accident) ಸಂಭವಿಸಿದೆ. ಈ ವಿಷಯ ಕೇಳಿ ಅಭಿಮಾನಿಗಳಿಗೆ ತೀವ್ರ ಆತಂಕ ಆಗಿದೆ. ಅದೃಷ್ಟವಶಾತ್ ಈ ಅಪಘಾತದಲ್ಲಿ ವಿಜಯ್ ದೇವರಕೊಂಡ ಅವರಿಗೆ ಯಾವುದೇ ಗಾಯಗಳಾಗಿಲ್ಲ.

ಸೋಮವಾರ (ಅಕ್ಟೋಬರ್ 6) ವಿಜಯ್ ದೇವರಕೊಂಡ ಅವರು ಪುಟ್ಟಪರ್ತಿಗೆ ಭೇಟಿ ನೀಡಿದ್ದರು. ಪುಟ್ಟಪರ್ತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದ ವಿಜಯ್ ಅವರು ಸತ್ಯ ಸಾಯಿ ಬಾಬಾ ಸಮಾಧಿ ನಮಿಸಿ ಆಶೀರ್ವಾದ ತೆಗೆದುಕೊಳ್ಳಲು ಬಂದಿದ್ದರು. ಅಲ್ಲಿಂದ ವಾಪಸ್ ಹೈದರಾಬಾದ್‌ಗೆ ತೆರಳುವಾಗ ಗದ್ವಾಲ್ ಜಿಲ್ಲೆಯ ಉಂಡವಳ್ಳಿಯಲ್ಲಿ ವಿಜಯ್ ದೇವರಕೊಂಡ ಅವರ ಕಾರು ಅಪಘಾತಕ್ಕೆ ಒಳಗಾಯಿತು.
ಸಹಾಯಕ ರವಿಕಾಂತ್ ಯಾದವ್ ಮತ್ತು ಚಾಲಕ ಅಂಡೆ ಶ್ರೀಕಾಂತ್ ಅವರು ವಿಜಯ್ ದೇವರಕೊಂಡ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಎದುರಿಗೆ ಇದ್ದ ಟ್ರಕ್ ತಕ್ಷಣ ಬ್ರೇಕ್ ಹಾಕಿದ್ದರಿಂದ ಈ ಅವಘಡ ಸಂಭವಿಸಿತು. ಆಗ ಇನ್ನೊಂದು ಕಾರಿಗೆ ವಿಜಯ್ ದೇವರಕೊಂಡ ಅವರ ಕಾರು ಡಿಕ್ಕಿ ಹೊಡೆಯಿತು. ಇದರಿಂದ ವಿಜಯ್ ದೇವರಕೊಂಡ ಅವರ ಕಾರಿಗೆ ಹಾನಿ ಆಗಿದೆ.
ಈ ಅಪಘಾತದಲ್ಲಿ ವಿಜಯ್ ದೇವರಕೊಂಡ ಹಾಗೂ ಅವರ ಜೊತೆಗಿದ್ದವರಿಗೆ ಏನೂ ತೊಂದರೆ ಆಗಿಲ್ಲ. ಕಾರು ಚಾಲಕ ಅಂಡೆ ಶ್ರೀಕಾಂತ್ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ಬಳಿಕ ವಿಜಯ್ ದೇವರಕೊಂಡ ಅವರು ಮತ್ತೊಂದು ಕಾರಿನಲ್ಲಿ ಹೈದರಾಬಾದ್‌ಗೆ ತೆರಳಿದರು.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ವಿಜಯ್ ದೇವರಕೊಂಡ ಅವರಿಗೆ ಜನಪ್ರಿಯತೆ ಇದೆ. ‘ಅರ್ಜುನ್ ರೆಡ್ಡಿ’, ‘ಲೈಗರ್’, ‘ಕಿಂಗ್ಡಮ್’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಹಲವು ವರ್ಷಗಳಿಂದ ರಶ್ಮಿಕಾ ಮಂದಣ್ಣ ಜೊತೆ ಅವರು ಆಪ್ತವಾಗಿದ್ದಾರೆ. ಇತ್ತೀಚೆಗೆ ಅವರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಕುಟುಂಬದ ಕಡೆಯಿಂದ ಯಾರೂ ಸ್ಪಷ್ಟಪಡಿಸಿಲ್ಲ.