ಅತ್ಯಾಚಾರ ನಡೆದಿಲ್ಲ ಎಂದ ಸಂತ್ರಸ್ತೆ: 11 ವರ್ಷದ ನಂತರ ನಾಲ್ವರು ಆರೋಪಿಗಳ ದೋಷಮುಕ್ತಿ

ಆಗ್ರಾ: ಸಾಮೂಹಿಕ ಅತ್ಯಾಚಾರ ಕೃತ್ಯ ನಡೆದೇ ಇಲ್ಲ ಎಂದು ಸಂತ್ರಸ್ತೆ ಎನ್ನಲಾದ ಮಹಿಳೆ ನ್ಯಾಯಾಲಯದಲ್ಲಿ ಒಪ್ಪಿಕೊಂಡ ಅಪರೂಪದ ಪ್ರಕರಣದಲ್ಲಿ ಉತ್ತರ ಪ್ರದೇಶದ ಎಟಾ ನ್ಯಾಯಾಲಯ ಹನ್ನೊಂದು ವರ್ಷಗಳ ಸುಧೀರ್ಘ ವಿಚಾರಣೆ ಬಳಿಕ ನಾಲ್ವರು ಆರೋಪಿಗಳನ್ನು ದೋಷಮುಕ್ತಗೊಳಿಸಿದೆ.

ಈ ಪ್ರಕರಣದಲ್ಲಿ ಸಾಮೂಹಿಕ ಅತ್ಯಾಚಾರದ ಕಟ್ಟುಕಥೆ ಕಟ್ಟಿ ದೂರು ನೀಡಿದ ಹಿನ್ನೆಲೆಯಲ್ಲಿ ಮಹಿಳೆ ಮತ್ತು ದೂರುದಾರ ಪತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಆದೇಶಿಸಿದೆ. ನ್ಯಾಯಸಮ್ಮತ ರೀತಿಯಲ್ಲಿ ತನಿಖೆ ನಡೆಸದ ತನಿಖಾಧಿಕಾರಿಯ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.
ಎಟಾ ನಿವಾಸಿಗಳಾದ ವೀರಭಾನ್, ಕಶ್ಮೀರ್ ಸಿಂಗ್, ಜಗಜೀತ್ ಸಿಂಗ್ ಮತ್ತು ಭಾನುಪ್ರತಾಪ್ ಎಂಬುವವರ ವಿರುದ್ಧ 2014ರ ಅಕ್ಟೋಬರ್ 25ರಂದು ರಾಜಾ ಕಾ ರಾಂಪುರ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡಸಂಹಿತೆ ಸೆಕ್ಷನ್ 376(2), 452, 504 ಮತ್ತು 506ರ ಅಡಿಯಲ್ಲಿ ಅತ್ಯಾಚಾರ, ಮನೆಗೆ ಅಕ್ರಮವಾಗಿ ನುಗ್ಗಿರುವುದು, ಉದ್ದೇಶಪೂರ್ವಕ ಅವಮಾನ ಮತ್ತು ಅಪರಾಧ ಬೆದರಿಕೆ ಆರೋಪ ಹೊರಿಸಲಾಗಿತ್ತು.
ಪತಿಯು ಮನೆಬಳಕೆ ಸಾಮಗ್ರಿಗಳನ್ನು ತರಲು ಹೋಗಿದ್ದ ಸಂದರ್ಭದಲ್ಲಿ ಸಶಸ್ತ್ರಧಾರಿಗಳಾಗಿ ಬಂದ ನಾಲ್ವರು ಬೆದರಿಸಿ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾಗಿ ಆಪಾದಿಸಲಾಗಿತ್ತು. ಇನ್ಸ್ಪೆಕ್ಟರ್ ದೇವೇಂದ್ರ ಶಂಕರ್ ಪಾಂಡೆ 2015ರ ಫೆಬ್ರುವರಿ 7ರಂದು ಆರೋಪಟ್ಟಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಅಭಿಯೋಜಕರು ಸಂತ್ರಸ್ತೆ ಎನ್ನಲಾದ ಮಹಿಳೆ, ಪತಿ, ಇಬ್ಬರು ಪೊಲೀಸ್ ಅಧಿಕಾರಿಗಳು ಹಾಗೂ ವೈದ್ಯ ಹೀಗೆ ಐದು ಸಾಕ್ಷಿಗಳನ್ನು ಹಾಜರುಪಡಿಸಿದ್ದರು.
ಆದರೆ ನಾಲ್ವರು ಆರೋಪಿಗಳನ್ನು ತಾನು ನೋಡಿಯೇ ಇಲ್ಲ; ಅವರು ಕಿರುಕುಳ ನೀಡಿಲ್ಲ, ಮನೆಗೆ ಪ್ರವೇಶಿಸಿಲ್ಲ ಅಥವಾ ಬೆದರಿಕೆ ಹಾಕಿಲ್ಲ ಎಂದು ವಿಚಾರಣೆ ವೇಳೆ ಮಹಿಳೆ ಹೇಳಿಕೆ ನೀಡುವ ಮೂಲಕ ಪ್ರಕರಣಕ್ಕೆ ತಿರುವು ಸಿಕ್ಕಿತು.
“ಈ ಕೃತ್ಯ ನಡೆದಿದೆ ಎನ್ನಲಾದ ಸಮಯದಲ್ಲಿ ಪತಿ ಗ್ರಾಮದ ಮುಖ್ಯಸ್ಥರಾಗಿದ್ದರು. ರಾಜಕೀಯ ವ್ಯಾಜ್ಯದಿಂದಾಗಿ ಅವರ ವಿರುದ್ಧ ಪ್ರಕರಣ ಇತ್ತು. ಅವರ ಮೇಲೆ ಒತ್ತಡ ಇತ್ತು ಹಾಗೂ ಈ ಪ್ರಕರಣದಲ್ಲಿ ಅವರನ್ನು ಸಿಲುಕಿಸಲಾಗಿತ್ತು. ನನಗೆ ಏನೂ ಆಗಿಲ್ಲ. ಯಾವುದೇ ವರದಿ ನೀಡಲು ನನ್ನನ್ನು ಪೊಲೀಸ್ ಠಾಣೆಗೆ ಪತಿಯೊಂದಿಗೆ ಕರೆದೊಯ್ಯಲಿಲ್ಲ. ಬಲವಂತವಾಗಿ ನನ್ನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಸುಧೀರ್ಘ ಕಾಲ ಇರಿಸಿಕೊಂಡು ಖಾಲಿ ಹಾಳೆಯಲ್ಲಿ ನನ್ನ ಹೆಬ್ಬೆಟ್ಟು ಪಡೆಯಲಾಗಿತ್ತು” ಎಂದು ನ್ಯಾಯಾಲಯದಲ್ಲಿ ಮಹಿಳೆ ಸ್ಪಷ್ಟಪಡಿಸಿದರು. ಇದರ ಆಧಾರದಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಮನೀಶಾ ಅವರು ಎಲ್ಲ ಆರೋಪಿಗಳನ್ನು ನಿರ್ದೋಷಿಗಳೆಂದು ಘೋಷಿಸಿ ತೀರ್ಪು ನೀಡಿದ್ದಾರೆ.