ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವಿ.ಎನ್. ನರಸ ರೆಡ್ಡಿ (103) ನಿಧನ

ತುಮಕೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ (Freedom Fighter) ಪಾವಗಡದ ವಿ.ಎನ್ ನರಸ ರೆಡ್ಡಿ (103) (V.N. Reddy) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ವಿ.ಎನ್ ರೆಡ್ಡಿಯವರು ಬ್ರಿಟಿಷರ ಆಳ್ವಿಕೆಯ (British Government) ದಾಖಲೆಗಳನ್ನು ನಾಶಪಡಿಸಲು ಇಲಿಗಳ ಬಾಲಕ್ಕೆ ಬಟ್ಟೆ ಸುತ್ತಿ, ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಪಾವಗಡ ತಾಲೂಕು ಕಛೇರಿಗೆ ಬಿಟ್ಟು ದಾಖಲೆಗಳನ್ನು ಸುಟ್ಟಿದ್ದರು. ಬ್ರಿಟಿಷರ ಖಜಾನೆ ಲೂಟಿ ಮಾಡಲು ಸಂಚು ರೂಪಿಸಿದ್ದರು. ಇದರಿಂದಾಗಿ ರಾತ್ರಿ ಮಲಗಿದ್ದ ವೇಳೆ ಪೊಲೀಸರು ವಿ.ಎನ್ ನರಸರೆಡ್ಡಿ ಸೇರಿದಂತೆ ಏಳು ಜನರನ್ನು ಬಂಧಿಸಿ ತುಮಕೂರು ಜೈಲಿಗೆ ಹಾಕಿದ್ದರು
ಜೈಲಿನಲ್ಲಿಯೂ ಬ್ರಿಟಿಷ್ ಆಳ್ವಿಕೆ ವಿರುದ್ಧ ಪ್ರತಿಭಟನೆ, ಹೋರಾಟಗಳನ್ನು ಮುಂದುವರಿಸಿದ್ದರಿಂದ ತುಮಕೂರು ಜೈಲಿನಿಂದ ಬೆಂಗಳೂರು ಸೆಂಟ್ರಲ್ ಜೈಲಿಗೆ ಹಾಕಲಾಗಿತ್ತು. ಅವರು 32 ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು. ಜೈಲು ಶಿಕ್ಷೆ ಬಳಿಕ ಪಾವಗಡ ತಾಲೂಕಿನಾದ್ಯಂತ ಎತ್ತಿನಗಾಡಿಯಲ್ಲಿ ಸಂಚರಿಸಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿದ್ದರು.
ರೆಡ್ಡಿಯವರು ಮಾಜಿ ಉಪ ರಾಷ್ಟ್ರಪತಿ ನೀಲಂ ಸಂಜೀವರೆಡ್ಡಿ, ಎ.ಎಂ ಲಿಂಗಣ್ಣ, ಕೊಲ್ಲೂರು ಸುಬ್ಬಾರಾವ್, ಪಡಪಲ್ಲಿ ಚಿದಂಬರ ರೆಡ್ಡಿಯವರ ಒಡನಾಡಿಯಾಗಿದ್ದರು. 1951-52ರಲ್ಲಿ ಭಾರತದ ಮೊದಲ ಸಾರ್ವತ್ರಿಕ ಚುನಾವಣೆ ನಂತರ ನಡೆದ ಎಲ್ಲಾ ಚುನಾವಣೆಗಳಲ್ಲೂ ಮತ ಚಲಾಯಿಸಿದ್ದರು.
ಅವರಿಗೆ ಇಬ್ಬರು ಪುತ್ರರು, ನಾಲ್ವರು ಪುತ್ರಿಯರಿದ್ದಾರೆ. ಮೃತರ ಸ್ವಗ್ರಾಮ ವೆಂಕಟಪುರ ಗ್ರಾಮದ ಸಮೀಪದ ತೋಟದಲ್ಲಿ ಅಂತ್ಯಕ್ರಿಯೆ ನಡೆದಿದೆ.