ಬಾವಿಗೆ ಉರುಳಿದ ವಾಹನ – ಮಗನ ನಂತರ ತಾಯಿ ಸಹ ಶೋಕದಲ್ಲಿ ಸಾವು

ಬೀದರ್: ತಾಲೂಕಿನ ಘೋಡಂಪಳ್ಳಿ ಗ್ರಾಮದ ಬಳಿ ಬುಧವಾರ (ಜು.02) ರಾತ್ರಿ 10ರ ಸುಮಾರಿಗೆ ಗೂಡ್ಸ್ ವಾಹನವೊಂದು ರಸ್ತೆ ಪಕ್ಕದ ಬಾವಿಗೆ ಉರುಳಿ, ಅದರಲ್ಲಿದ್ದ ಇಬ್ಬರು ಸಾವನಪ್ಪಿದರು. ಗಂಭೀರವಾಗಿ ಗಾಯಗೊಂಡಿರುವ ಐವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಮತ್ತೊಂದೆಡೆ ಮಗನ ಸಾವಿನ ಸುದ್ದಿ ತಿಳಿದು ತಾಯಿ ಸಹ ಹೃದಯಾಘಾತದಿಂದ ಸಾವನಪ್ಪಿರುವ ಮನಕಲಕುವ ಘಟನೆ ನಡೆದಿದೆ. ಗೂಡ್ಸ್ ವಾಹನ ಬಾವಿಗೆ ಬಿದ್ದು ಮಗ ಲಕ್ಷ್ಮೀಕಾಂತ್ ಜೋಶಿ ಅಲಿಯಾಸ್ ಕಾಂತರಾಜು (45) ಸಾವನಪ್ಪಿದ್ದಾರೆ, ಸುದ್ದಿ ಕೇಳಿ ಆಘಾತಗೊಂಡ ತಾಯಿ ಶಾರದಾಬಾಯಿ (86) ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಒಂದೇ ದಿನ ತಾಯಿ- ಮಗನ ಸಾವು ಘಟನೆಯಿಂದ ಘೋಡಂಪಳ್ಳಿ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನ ಮನಕಲಕುವಂತಿದೆ. ಅಪಘಾತದ ದುರ್ಘಟನೆಯಲ್ಲಿ ಘೋಡಂಪಳ್ಳಿ ಗ್ರಾಮದ ರವಿ ಪಾಗದೊಡ್ಡಿ (18) ಸಾವನಪ್ಪಿದ್ದಾರೆ.
