ವ್ಯಾಟಿಕನ್: ಯುದ್ಧ ಮಾಡುವವರ ಪ್ರಾರ್ಥನೆಯನ್ನು ದೇವರು ಎಂದಿಗೂ ಆಲಿಸುವುದಿಲ್ಲ; ಪೋಪ್ ಲಿಯೋ ಕಟು ಎಚ್ಚರಿಕೆ

ವ್ಯಾಟಿಕನ್ ಸಿಟಿ: ಯುದ್ಧ ನಡೆಸುವವರ ಪ್ರಾರ್ಥನೆಗಳನ್ನು ದೇವರು ಸ್ವೀಕರಿಸುವುದಿಲ್ಲ ಎಂದು ಪೋಪ್ ಲಿಯೋ XIV ಹೇಳಿದ್ದಾರೆ.
ಪಾಮ್ ಸಂಡೆಯ ಅಂಗವಾಗಿ ವ್ಯಾಟಿಕನ್ ನ ಸೇಂಟ್ ಪೀಟರ್ಸ್ ಸ್ಟೇರ್ ನಲ್ಲಿ ನಡೆದ ಪ್ರಾರ್ಥನೆಯಲ್ಲಿ ಮಾತನಾಡಿದ ಅವರು, ಹಿಂಸಾಚಾರವನ್ನು ನಂಬಿಕೆಯ ಹೆಸರಿನಲ್ಲಿ ಸಮರ್ಥಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
“ಕೈಗೆ ರಕ್ತ ಮೆತ್ತಿಕೊಂಡವರ ಪ್ರಾರ್ಥನೆಗಳನ್ನು ದೇವರು ತಿರಸ್ಕರಿಸುತ್ತಾನೆ. ನಂಬಿಕೆಯು ತಮ್ಮ ಕೆಲಸದಲ್ಲಿ ವ್ಯಕ್ತವಾಗಬೇಕು,” ಎಂದು ಅವರು ಹೇಳಿದರು.
ಪಾಮ್ ಸಂಡೆಯು ಕ್ರೈಸ್ತ ಧರ್ಮದಲ್ಲಿ ಪವಿತ್ರ ವಾರದ ಆರಂಭವನ್ನು ಸೂಚಿಸುತ್ತದೆ. ಯೇಸುಕ್ರಿಸ್ತನು ಜೆರುಸಲೇಮಿಗೆ ಪ್ರವೇಶಿಸಿದ ಸಂದರ್ಭದ ನೆನಪಿಗೆ ಈ ದಿನ ಆಚರಿಲಾಗುತ್ತದೆ. ಈ ಹಿನ್ನೆಲೆಯಲ್ಲಿ ನಡೆದ ಪ್ರಾರ್ಥನೆಗೆ ಸಾವಿರಾರು ಭಕ್ತರು ಭಾಗವಹಿಸಿದ್ದರು.

ಮಧ್ಯಪ್ರಾಚ್ಯ ಸೇರಿದಂತೆ ಯುದ್ಧಪೀಡಿತ ಪ್ರದೇಶಗಳ ಬಗ್ಗೆ ಪೋಪ್ ಕಳವಳ ವ್ಯಕ್ತಪಡಿಸಿದರು. ಹಿಂಸಾಚಾರದಿಂದ ಅನೇಕರು ಪವಿತ್ರ ವಾರವನ್ನು ಸಾಮಾನ್ಯವಾಗಿ ಆಚರಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.
ಸಂವಾದ ಮತ್ತು ಶಾಂತಿಯುತ ಪರಿಹಾರಗಳಿಗೆ ಒತ್ತು ನೀಡಿದ ಅವರು, ಕದನ ವಿರಾಮಕ್ಕೆ ಕರೆ ನೀಡಿದರು. ಸಂಘರ್ಷಕ್ಕಿಂತ ಮಾನವೀಯ ಅಗತ್ಯಗಳಿಗೆ ಆದ್ಯತೆ ನೀಡಬೇಕು ಎಂದು ವಿಶ್ವ ನಾಯಕರನ್ನು ಮನವಿ ಮಾಡಿದರು.
ಪಾಮ್ ಸಂಡೆಯ ನಂತರ ಗುಡ್ ಪ್ರೈಡೇ, ಪವಿತ್ರ ಶನಿವಾರ ಹಾಗೂ ಈಸ್ಟರ್ ರವಿವಾರ ಆಚರಿಸಲಾಗುತ್ತದೆ. ನಂಬಿಕೆ ಮತ್ತು ಯುದ್ಧ ಒಂದಾಗಿ ಸಾಗಲು ಸಾಧ್ಯವಿಲ್ಲ ಎಂದು ಪೋಪ್ ಹೇಳಿದ್ದಾರೆ. ಸಂಘರ್ಷದಿಂದ ಪೀಡಿತರ ಪರ ನಿಲ್ಲುವಂತೆ ಜನರಿಗೆ ಅವರು ಕರೆ ನೀಡಿದ್ದಾರೆ.