ವರ್ತೂರು ಪೊಲೀಸರ ದೌರ್ಜನ್ಯ: ಮನೆ ಕೆಲಸದಾಕೆ ಸುಂದರಿ ಬೀಬಿ ಹಲ್ಲೆ ಪ್ರಕರಣದ ಬಗ್ಗೆ ತುರ್ತು ವರದಿ ಕೇಳಿದ ಗೃಹ ಸಚಿವ ಜಿ. ಪರಮೇಶ್ವರ್

ಬೆಂಗಳೂರು: ವರ್ತೂರು ಪೊಲೀಸರು (Varthur Police) ಮನೆ ಕೆಲಸದಾಕೆ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ನನ್ನ ಗಮನಕ್ಕೂ ಬಂದಿದೆ. ಪೊಲೀಸ್ ಆಯುಕ್ತರಿಂದ ಇದರ ಬಗ್ಗೆ ವರದಿ ಕೇಳಿದ್ದೇನೆ. ವರದಿ ಬಂದ ಕೂಡಲೇ ಪರಿಶೀಲಿಸಿ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ (G Parameshwar) ಭರವಸೆ ನೀಡಿದ್ದಾರೆ.

ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ʻಪಬ್ಲಿಕ್ ಟಿವಿʼ ವರದಿಗೆ ಪ್ರತಿಕ್ರಿಯಿಸಿದರು. ಹಲ್ಲೆ ವಿಚಾರ ನನ್ನ ಗಮನಕ್ಕೂ ಬಂದಿದೆ. ವರದಿ ಬಂದ ಬಳಿಕ ಪರಿಶೀಲಿಸಿ ಪೊಲೀಸರ ವಿರುದ್ಧ ಕ್ರಮ ತಗೋತೀವಿ ಎಂದಿದ್ದಾರೆ.
ಅಲ್ಲದೇ ಇಂದು ಬೆಳಗ್ಗೆ ನಗರ ಪೊಲೀಸ್ ಆಯುಕ್ತರಿಗೆ ದೂರವಾಣಿ ಕರೆ ಮಾಡಿದ ಸಚಿವರು, ವರ್ತೂರು ಪ್ರಕರಣ ಕುರಿತು ತುರ್ತು ವರದಿ ಕೊಡುವಂತೆ ಸೂಚನೆ ನೀಡಿದ್ದಾರೆ.
ಏನಿದು ಪ್ರಕರಣ?
ಕಳ್ಳತನ ಆರೋಪ ಹೊತ್ತ ಪಶ್ಚಿಮ ಬಂಗಾಳದ ಯುವತಿ ಸುಂದರಿ ಬೀಬಿ ಮೇಲೆ ಬೆಂಗಳೂರಿನ ವರ್ತೂರು ಪೊಲೀಸರು, ಮನಸೋಇಚ್ಚೆ ಹಲ್ಲೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಯುವತಿಯ ಖಾಸಗಿ ಅಂಗಗಳಿಗೆ ಹಾಗೂ ಕೈ ಕಾಲು, ತಲೆಗೆ ಮನ ಬಂದಂತೆ ಥಳಿಸಿದ್ದಾರೆ ಎನ್ನಲಾಗಿದೆ. ಯುವತಿಯ ದೇಹವೆಲ್ಲ ರಕ್ತ ಹೆಪ್ಪುಗಟ್ಟಿದ್ದು, ಹಲ್ಲೆಯ ಭೀಕತೆಯ ಬಗ್ಗೆ ಬೌರಿಂಗ್ ಆಸ್ಪತ್ರೆಯ ವೈದ್ಯರೇ ಶಾಕ್ ಆಗಿದ್ದಾರೆ.
ವಿಷ್ಯ ಏನಪ್ಪ ಅಂದ್ರೆ ಪಶ್ಚಿಮ ಬಂಗಾಳದ 24 ವರ್ಷದ ಸುಂದರಿ ಬೀಬಿ, ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್ಮೆಂಟ್‌ನ ಫ್ಲ್ಯಾಟ್‌ವೊಂದರಲ್ಲಿ ಮನೆಗೆಲಸ ಮಾಡ್ತಿದ್ರು. ಆ ಫ್ಲ್ಯಾಟ್‌ನಲ್ಲಿ ಕಸ ಗುಡಿಸುವಾಗ 100 ರೂಪಾಯಿ ಕೆಳಗೆ ಬಿದ್ದಿರೋದನ್ನ ತಗೊಂಡು ಮಾಲೀಕರಿಗೆ ಕೊಡಲು ಹೋಗಿದ್ದಾರೆ. ಆದ್ರೆ ಹಣದ ಜೊತೆಗೆ ಮನೆಯಲ್ಲಿ ಬಂಗಾರದ ರಿಂಗ್ ತೊಗೊಂಡಿದ್ದೀಯ ಅಂತ ಫ್ಲ್ಯಾಟ್ ಮಾಲೀಕರು ವರ್ತೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ವರ್ತೂರು ಪೊಲೀಸರು ಮನ ಬಂದಂತೆ ಖಾಸಗಿ ಅಂಗಗಳನ್ನ ಬಿಡದೇ ಒಬ್ಬರಾಗ್ತಿದ್ದಂತೆ ಒಬ್ಬರು ಸುಂದರಿ ಬೀಬಿ ಮೇಲೆ ಹಲ್ಲೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬರ್ತಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದು, ನಡೆದಾಡಲು ಆಗದ ಸ್ಥಿತಿಯಲ್ಲಿದ್ದಾರೆ. ಹಲ್ಲೆಯ ಕುರಿತು ಪಬ್ಲಿಕ್ ಟಿವಿ ಜೊತೆ ಸುಂದರಿ ಬೀಬಿ ಹಂಚಿಕೊಂಡಿದ್ದು, ಪೊಲೀಸರ ವಿರುದ್ಧ ಆರೋಪ ಮಾಡ್ತಿದ್ದಾರೆ.
ಈ ಘಟನೆಯ ಬಗ್ಗೆ ಪಶ್ಚಿಮ ಬಂಗಾಳದ ರಾಜ್ಯಸಭಾ ಸದಸ್ಯ ಹಾಗೂ ವಲಸೆ ಕಾರ್ಮಿಕರ ಕಲ್ಯಾಣ ಮಂಡಳಿಯ ಅಧ್ಯಕ್ಷರಾಗಿರುವ ಸಮೀರ್ ಉಲ್ ಆಕ್ರೋಶ ಹೊರ ಹಾಕಿದ್ದಾರೆ. ಬೆಂಗಳೂರು ಪೊಲೀಸರ ಅಮಾನವೀಯ ವರ್ತನೆ ಹಾಗೂ ಕ್ರೌರ್ಯದ ಕುರಿತು ಪ.ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಕಚೇರಿಗೂ ಈ ವಿಷ್ಯ ತಿಳಿಸಿದ್ದಾರೆ. ಸುಂದರಿ ಬೀಬಿಯನ್ನ ಸಂಪರ್ಕಿಸಿದ ದೀದಿ ಸರ್ಕಾರ, ವರ್ತೂರು ಪೊಲೀಸರ ವರ್ತನೆ ಖಂಡಿಸಿದ್ದು, ಕಾನೂನಿನ ನೆರವಿನ ಭರವಸೆ ನೀಡಿದೆ. ಪಬ್ಲಿಕ್ ಟಿವಿಯ ಜೊತೆ ಪ. ಬಂಗಾಳದ ಸಂಸದ ಸಮೀರ್ ಉಲ್ ಫೋನಲ್ಲಿ ಮಾತನಾಡಿದ್ದು, ಈ ಘಟನೆಯನ್ನ ಖಂಡಿಸಿ, ಅಗತ್ಯ ಕಾನೂನು ನೆರವು ಕೊಡ್ತೇನೆ ಎಂದ್ರು.
ಘಟನೆಯ ಗಂಭೀರತೆ ಅರಿತು ಮಹಿಳಾ ಆಯೋಗ ಸುಮೋಟೋ ಕೇಸ್ ದಾಖಲಿಸಿಕೊಂಡಿದೆ. ಈ ಕೃತ್ಯದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದೆ. ಹಲ್ಲೆಗೊಳಗಾದ ಸುಂದರಿ ಬೀಬಿ ದಂಪತಿ ವಿಮೋಚನಾ ಮಹಿಳಾ ಸಹಾಯವಾಣಿಗೂ ದೂರು ನೀಡಿದ್ದಾರೆ.