ಬಾವಿಗೆ ಬಿದ್ದ ವ್ಯಾನ್: ಬಾವಿಯೊಳಗಿದ್ದ ಆ ವಸ್ತು 10 ಜನರ ಜೀವವನ್ನೇ ಪಡೆಯಿತು

ಮಧ್ಯಪ್ರದೇಶದ ಮಾಂಡ್ಸೌರ್ ಜಿಲ್ಲೆಯ ಕಚರಿಯಾ ಗ್ರಾಮದಲ್ಲಿ ನಿನ್ನೆ ( ಏಪ್ರಿಲ್ 27 ) ಸಂಭವಿಸಿದ ಭೀಕರ ಅಪಘಾತದಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ. 13 ಪ್ರಯಾಣಿಕರಿದ್ದ ವ್ಯಾನ್ ಬಾವಿಗೆ ಬಿದ್ದಿದ್ದು ಬಾವಿಯಲ್ಲಿದ್ದ ವಿಷಕಾರಿ ಅನಿಲದಿಂದಾಗಿ ಪ್ರಯಾಣಿಕರು ಮತ್ತು ರಕ್ಷಣಾ ಕಾರ್ಯಕರ್ತರೊಬ್ಬರು ಸಾವನ್ನಪ್ಪಿದ್ದಾರೆ.
ವ್ಯಾನ್ ಚಾಲಕನ ನಿಯಂತ್ರಣ ತಪ್ಪಿ ಮೊದಲು ಬೈಕ್ ಸವಾರನೊಬ್ಬನನ್ನು ಡಿಕ್ಕಿ ಹೊಡೆದು ನಂತರ ಬಾವಿಗೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸ್ಥಳೀಯ ನಿವಾಸಿ ಮನೋಹರ್ ಸಿಂಗ್ (42) ಎಂಬಾತ ಬಾವಿಯಲ್ಲಿ ಇಳಿದು ಮೂವರನ್ನು ರಕ್ಷಿಸಿದರೂ, ವಿಷಕಾರಿ ಅನಿಲದಿಂದ ಮೃತಪಟ್ಟರು. ಒಟ್ಟು 10 ಮಂದಿ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ದೇವೇಂದ್ರ (10), ಮುಕೇಶ್ ಕೀರ್ (28), ಮಾಯಾ ಕೀರ್ (26) ಮತ್ತು ಪ್ರಿಯಾಂಶಿ (3) ಸೇರಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಸೇರಿದಂತೆ ರಕ್ಷಣಾ ತಂಡಗಳು ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿವೆ.
ಉಪಮುಖ್ಯಮಂತ್ರಿ ಜಗದೀಶ್ ದೇವದಾ ಅವರು ಸ್ಥಳಕ್ಕೆ ಭೇಟಿ ನೀಡಿ, ರಕ್ಷಣಾ ಕಾರ್ಯವನ್ನು ವೇಗಗೊಳಿಸುವಂತೆ ಸೂಚಿಸಿದರು. ಪ್ರಧಾನಿ ನರೇಂದ್ರ ಮೋದಿ ಈ ಘಟನೆಗೆ ಸಂತಾಪ ಸೂಚಿಸಿದ್ದಾರೆ. ಬಾವಿಯಲ್ಲಿ ವಿಷಕಾರಿ ಅನಿಲ ಇರುವುದು ರಕ್ಷಣಾ ಕಾರ್ಯಕ್ಕೆ ಸವಾಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.