ವಿ.ಕೆ. ಸಕ್ಸೇನಾ ಮಾನಹಾನಿ ಪ್ರಕರಣ: ಮೇಧಾ ಪಾಟ್ಕರ್‌ಗೆ ಸುಪ್ರೀಂ ಕೋರ್ಟ್‌ನಿಂದ ಶಿಕ್ಷೆ ಎತ್ತಿಹಿಡಿಯುವ ತೀರ್ಪು

ನವದೆಹಲಿ: ದೆಹಲಿ ಸರ್ಕಾರದ ಪ್ರಸ್ತುತ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸೆಕ್ಸೇನಾ ಅವರು ಹಾಕಿದ್ದ 25 ವರ್ಷಗಳ ಹಳೆಯ ಮಾನಹಾನಿ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರಿಗೆ ವಿಧಿಸಲಾದ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಇಂದು ಎತ್ತಿ ಹಿಡಿದಿದೆ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಜುಲೈ 29ರಂದು ನೀಡಿರುವ ತೀರ್ಪಿನಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಕೋಟಿಶ್ವರ್ ಸಿಂಗ್ ನೇತೃತ್ವದ ಪೀಠ ಹೇಳಿದೆ.
ಆದರೆ, ಅರ್ಜಿದಾರರ ವಾದ ಆಲಿಸಿದ ಪೀಠ ದಂಡವನ್ನು ರದ್ದು ಮಾಡಿದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗುವಂತೆ ತಿಳಿಸಿದೆ.
ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪು ರದ್ದುಪಡಿಸುವಂತೆ ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಮೇಧಾ ಮನವಿ ಸಲ್ಲಿಸಿದ್ದರು.
‘ಸೆಷನ್ಸ್ ನ್ಯಾಯಾಲಯದ ಆದೇಶದಲ್ಲಿ ಯಾವುದೇ ಅಕ್ರಮವಾಗಿಲ್ಲ. ಇದರಲ್ಲಿ ಯಾವುದೇ ಹಸ್ತಕ್ಷೇಪದ ಅಗತ್ಯವಿಲ್ಲ. ಹೀಗಾಗಿ ಅರ್ಜಿಯನ್ನು ವಜಾಗೊಳಿಸಲಾಗುತ್ತಿದೆ’ ಎಂದು ದೆಹಲಿ ಹೈಕೋರ್ಟ್ ಪೀಠ ಹೇಳಿತ್ತು.
ಗುಜರಾತ್‌ನಲ್ಲಿ ಎನ್‌ಜಿಒ ನಡೆಸುತ್ತಿದ್ದ ವಿ.ಕೆ. ಸೆಕ್ಸೇನಾ ಅವರು 23 ವರ್ಷಗಳ ಹಿಂದೆ ಮೇಧಾ ಪಾಟ್ಕರ್ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದರು.
2000ನೇ ಇಸವಿಯಲ್ಲಿ ದಾಖಲಾಗಿದ್ದ ಮಾನಹಾನಿ ಪ್ರಕರಣದಲ್ಲಿ ಪಾಟ್ಕರ್ ಅಪರಾಧಿ ಎಂದು ತೀರ್ಪು ನೀಡಿದ್ದ ದೆಹಲಿ ನ್ಯಾಯಾಲಯ 5 ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿಶಾಲ್ ಸಿಂಗ್, ಪಾಟ್ಕರ್ (75) ಅವರ ವಯಸ್ಸು, ಅಪರಾಧದ ತೀವ್ರತೆ ಮತ್ತು ಅವರು ಈ ಹಿಂದೆ ಯಾವುದೇ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗದೇ ಇರುವುದನ್ನು ಪರಿಗಣಿಸಿ ಕಳೆದ ಏಪ್ರಿಲ್ 8ರಂದು ಪ್ರೊಬೇಷನ್ ಅವಧಿ ಶಿಕ್ಷೆ ವಿಧಿಸಿ ಆದೇಶಿಸಿದ್ದರು.
ಪ್ರೊಬೇಷನ್ ಅವಧಿಯಲ್ಲಿ ಅಪರಾಧಿಗಳನ್ನು ಜೈಲಿನಲ್ಲಿ ಇರಿಸದೆ, ಅವರ ದೈನಂದಿನ ಚಟುವಟಿಕೆಯ ಮೇಲೆ ನಿಗಾ ಇಡಲಾಗುತ್ತದೆ.
ಆದೇಶದ ಪ್ರಕಾರ, ಏಪ್ರಿಲ್ 23ರೊಳಗೆ ಪ್ರೊಬೇಷನ್ ಬಾಂಡ್‌ಗಳನ್ನು ಸಲ್ಲಿಸುವಂತೆ ಪಾಟ್ಕರ್ ಅವರಿಗೆ ಸೂಚಿಸಲಾಗಿತ್ತು. ಆದರೆ ಯಾವುದೇ ದಾಖಲೆಗಳನ್ನು ಸಲ್ಲಿಸದ ಕಾರಣ, ನ್ಯಾಯಾಲಯವು ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು.
