ಉತ್ತರ ಪ್ರದೇಶ: ಪ್ರಖ್ಯಾತ ಯೂಟ್ಯೂಬರ್ ಸಲೀಂ ವಾಸ್ತಿಕ್ಗೆ ಚಾಕು ಇರಿತ; ಗಂಭೀರ ಗಾಯ

ಗಾಝಿಯಾಬಾದ್: ಯೂಟ್ಯೂಬರ್ ಸಲೀಮ್ ವಾಸ್ತಿಕ್ ಅವರ ಮೇಲೆ ಉತ್ತರ ಪ್ರದೇಶದ ಗಾಝಿಯಾಬಾದ್ ನಲ್ಲಿರುವ ಅವರ ನಿವಾಸದಲ್ಲಿ ದಾಳಿ ನಡೆದಿದ್ದು, ಚೂರಿ ಇರಿತದಿಂದ ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಶೋಕ್ ವಿಹಾರ್ ಕಾಲೋನಿಯಲ್ಲಿ ಶುಕ್ರವಾರ ಈ ದಾಳಿ ನಡೆದಿದೆ. ನಂಬರ್ ಪ್ಲೇಟ್ ಇಲ್ಲದ ಮೋಟರ್ ಸೈಕಲ್ ನಲ್ಲಿ ಆಗಮಿಸಿದ ಇಬ್ಬರು ಧರಿಸಿದ್ದ ಹೆಲೆಟ್ ತೆಗೆಯದೇ ದಾಳಿ ನಡೆಸಿದ್ದಾರೆ. ಸುಮಾರು 50 ವರ್ಷ ವಯಸ್ಸಿನ ವಾಸ್ತಿಕ್ ಅವರ ಮನೆ ಪ್ರವೇಶಿಸಿದ ದಾಳಿಕೋರರು, ಹೊಟ್ಟೆ ಮತ್ತು ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.


ಅವರ ಕತ್ತು ಸೀಳುವ ಪ್ರಯತ್ನವೂ ನಡೆದಿತ್ತು ಎನ್ನಲಾಗಿದ್ದು, ಸ್ಥಳೀಯರು ಹಾಗೂ ಕುಟುಂಬ ಸದಸ್ಯರು ವಾಸ್ತಿಕ್ ನೆರವಿಗೆ ಧಾವಿಸಿ ಆಸ್ಪತ್ರೆಗೆ ಕರೆದೊಯ್ದರು ಎಂದು ತಿಳಿದುಬಂದಿದೆ.
ಇದು ಮಾರಣಾಂತಿಕ ಗಾಯ ಎಂದು ಆಸ್ಪತ್ರೆಯಲ್ಲಿ ವೈದ್ಯರು ಅಭಿಪ್ರಾಯಪಟ್ಟ ಬಳಿಕ ದೆಹಲಿಯ ಗುರುತೇಜ್ ಬಹದ್ದೂರ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಚಿಕಿತ್ಸೆ ಪಡೆಯುತ್ತಿರುವ ವಾಸ್ತಿಕ್ ದೇಹಸ್ಥಿತಿ ಇನ್ನೂ ಗಂಭೀರವಾಗಿಯೇ ಇದೆ ಎಂದು ವೈದ್ಯರು ಹೇಳಿದ್ದಾರೆ.
ವಾಸ್ತಿಕ್ ಪುತ್ರ ಉಸ್ಮಾನ್ ಈ ಸಂಬಂಧ ದೂರು ದಾಖಲಿಸಿದ್ದು, ಪ್ರಕರಣ ದಾಖಲಾಗಿದೆ. ಪೊಲೀಸರು ಅಕ್ಕಪಕ್ಕದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಯನ್ನು ಪರಿಶೀಲಿಸುತ್ತಿದ್ದು, ದಾಳಿಕೋರರ ಪತ್ತೆ ಮತ್ತು ಬಂಧನಕ್ಕೆ ತಂಡಗಳನ್ನು ರಚಿಸಿದ್ದಾರೆ.