ಅಮೆರಿಕ ಟ್ಯಾರಿಫ್ ಹೊಡೆತ: 40 ದೇಶಗಳಲ್ಲಿ ಪರ್ಯಾಯ ಮಾರುಕಟ್ಟೆ ಹುಡುಕುತ್ತಿರುವ ಭಾರತದ ಜವಳಿ ಉದ್ಯಮ

ನವದೆಹಲಿ: ಅಮೆರಿಕದ ಟ್ಯಾರಿಫ್ಗಳಿಂದ ಅತಿಹೆಚ್ಚು ಬಾಧಿತವಾಗುವ ಸೆಕ್ಟರ್ಗಳಲ್ಲಿ ಜವಳಿ ಉದ್ಯಮವೂ ಒಂದು. ಭಾರತದ ಜವಳಿ ಉದ್ಯಮಕ್ಕೆ ಅತಿದೊಡ್ಡ ಮಾರುಕಟ್ಟೆ ಅಮೆರಿಕವೇ ಆಗಿದೆ. ಶೇ. 60ಕ್ಕಿಂತಲೂ ಹೆಚ್ಚು ಟ್ಯಾರಿಫ್ ಅನ್ವಯ ಆಗುತ್ತಿರುವುದರಿಂದ ಬಾಂಗ್ಲಾದೇಶ, ವಿಯೆಟ್ನಾಂ ಇತ್ಯಾದಿ ದೇಶಗಳ ಸರಕುಗಳೊಂದಿಗೆ ಭಾರತದ ಉದ್ಯಮಗಳು ಪೈಪೋಟಿ ನೀಡಲು ಆಗುವುದಿಲ್ಲ. ಹೀಗಾಗಿ ಹಲವು ಬಿಲಿಯನ್ ಡಾಲರ್ ಮೊತ್ತದ ವ್ಯಾಪಾರ ಕಳೆದುಕೊಳ್ಳುವ ಭೀತಿಯಲ್ಲಿ ಭಾರತದ ಜವಳಿ ಉದ್ಯಮ ಇದೆ. ಇದನ್ನು ತಪ್ಪಿಸಲು ಭಾರತ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಮೆರಿಕಕ್ಕೆ ಪರ್ಯಾಯವಾದ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳಲು ಭಾರತ ಯತ್ನಿಸುತ್ತಿದೆ.

ವರದಿಗಳ ಪ್ರಕಾರ ಭಾರತವು ಜವಳಿ ಉತ್ಪನ್ನಗಳ ರಫ್ತಿಗಾಗಿ 40 ದೇಶಗಳ ಮೇಲೆ ಗಮನ ಹರಿಸಿದೆ. ಬ್ರಿಟನ್, ಜಪಾನ್, ಸೌತ್ ಕೊರಿಯಾ, ಜರ್ಮನಿ, ಫ್ರಾನ್ಸ್, ಇಟಲಿ, ಸ್ಪೇನ್, ನೆದರ್ಲ್ಯಾಂಡ್ಸ್, ಪೋಲ್ಯಾಂಡ್, ಕೆನಡಾ, ಮೆಕ್ಸಿಕೋ, ರಷ್ಯಾ, ಬೆಲ್ಜಿಯಂ, ಟರ್ಕಿ, ಯುಎಇ, ಆಸ್ಟ್ರೇಲಿಯಾ ಇತ್ಯಾದಿ ಮಾರುಕಟ್ಟೆಗಳಿಗೆ ರಫ್ತು ಹೆಚ್ಚಿಸುವ ಸಾಧ್ಯಾಸಾಧ್ಯತೆಯನ್ನು ಭಾರತ ಅವಲೋಕಿಸುತ್ತಿದೆ.
ಭಾರತದ ಜವಳಿ ಉತ್ಪನ್ನಗಳು ವಿಶ್ವದ ಬಹುತೇಕ ಎಲ್ಲಾ ದೇಶಗಳಿಗೂ ರಫ್ತಾಗುತ್ತಿವೆ. ಆದರೆ, ಸುಮಾರು 40-50 ದೇಶಗಳು ಅತಿಹೆಚ್ಚು ಉಡುಪುಗಳನ್ನು ಆಮದು ಮಾಡಿಕೊಳ್ಳುತ್ತವೆ. ಈ ಪೈಕಿ ಭಾರತವು ಅಮೆರಿಕಕ್ಕೆ ಪರ್ಯಾಯವಾಗಿ 40 ದೇಶಗಳ ಮಾರುಕಟ್ಟೆಯನ್ನು ಆಯ್ದುಕೊಂಡಿದೆ. ಈ 40 ದೇಶಗಳು ಒಂದು ವರ್ಷದಲ್ಲಿ ಆಮದು ಮಾಡಿಕೊಳ್ಳುವ ಜವಳಿ ಉತ್ಪನ್ನಗಳ ಮೌಲ್ಯ 590 ಬಿಲಿಯನ್ ಡಾಲರ್. ಇದರಲ್ಲಿ ಭಾರತದ ಪಾಲು ಶೇ. 5-6 ಮಾತ್ರವೇ ಎನ್ನಲಾಗಿದೆ. ಹೀಗಾಗಿ, ಈ ಮಾರುಕಟ್ಟೆಗಳಿಗೆ ಭಾರತ ಮತ್ತಷ್ಟು ರಫ್ತು ಮಾಡಲು ಹೆಚ್ಚು ಅವಕಾಶ ಇದೆ.
2024-24ರಲ್ಲಿ ಭಾರತದ ಒಟ್ಟಾರೆ ಜವಳಿ ಉದ್ಯಮದ ಗಾತ್ರ 179 ಬಿಲಿಯನ್ ಡಾಲರ್ನಷ್ಟು ಇದೆ. ಇದರಲ್ಲಿ ಅತಿಹೆಚ್ಚು ಬ್ಯುಸಿನೆಸ್ ಆಗುತ್ತಿರುವುದು ದೇಶೀಯ ಮಾರುಕಟ್ಟೆಯಲ್ಲೇ. ರಫ್ತಾಗುತ್ತಿರುವುದು 37 ಬಿಲಿಯನ್ ಡಾಲರ್ ಮೌಲ್ಯದ ಜವಳಿ ಉತ್ಪನ್ನಗಳು ಮಾತ್ರವೇ. ಜಾಗತಿಕವಾಗಿ ವಿವಿಧ ದೇಶಗಳು ಆಮದು ಮಾಡಿಕೊಳ್ಳುತ್ತಿರುವುದು 800.77 ಬಿಲಿಯನ್ ಡಾಲರ್ ಮೌಲ್ಯದ ಜವಳಿ ಉತ್ಪನ್ನಗಳನ್ನು. ಈ ಜಾಗತಿಕ ಜವಳಿ ರಫ್ತಿನಲ್ಲಿ ಭಾರತದ ಪಾಲು ಶೇ. 4.1 ಇದೆ.
