ರಾಜ್ಯದಲ್ಲಿ ಯೂರಿಯಾ ಗೊಬ್ಬರ ಕೊರತೆ: ರೈತರಿಂದ ತೀವ್ರ ಪ್ರತಿಭಟನೆ, ರಾಜಕೀಯ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪ!

ಹುಬ್ಬಳ್ಳಿ/ಬೆಂಗಳೂರು: ಮುಂಗಾರು ಮಳೆ ಸಕಾಲಕ್ಕೆ ಸುರಿದು ಬಿತ್ತನೆಯಾಗಿರುವ ಬೆನ್ನಲ್ಲೇ ರಾಜ್ಯದಲ್ಲಿ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದ್ದು, ಅಗತ್ಯಕ್ಕೆ ತಕ್ಕಂತೆ ಲಭ್ಯವಿರದ ಕಾರಣ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಳಗ್ಗೆಯೇ ಎದ್ದು ಸರತಿ ಸಾಲಿನಲ್ಲಿ ನಿಂತರೂ ಗೊಬ್ಬರ ಸಿಗದೆ ಕಂಗಾಲಾಗಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸಹಿತ ಮೈಸೂರು ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ವಿಜಯಪುರದಲ್ಲಿ ಯೂರಿಯಾ ಗೊಬ್ಬರಕ್ಕೆ ಯಾವುದೇ ಕೊರತೆ ಉಂಟಾಗಿಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಚಿತ್ರದುರ್ಗ ಎಪಿಎಂಸಿಗೆ ಆಗಮಿಸಿದ್ದ ರೈತರು “ಒಬ್ಬರಿಗೆ 2 ಚೀಲ’ ಮಾತ್ರ ಎಂಬ ಫಲಕ ನೋಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಅಗತ್ಯಕ್ಕೆ ತಕ್ಕಂತೆ ಗೊಬ್ಬರ ಪೂರೈಸಿ ಎಂದು ಆಗ್ರಹಿಸಿದ್ದಾರೆ.
ಇದರ ಬೆನ್ನಲ್ಲೇ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಕೇಂದ್ರ ಸಚಿವ ಜೆ.ಪಿ.ನಡ್ಡಾಗೆ ಪತ್ರ ಬರೆದಿದ್ದು, ತತ್‌ಕ್ಷಣವೇ 6 ಸಾವಿರ ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಸುವಂತೆ ಆಗ್ರಹಿಸಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಟಿಎಪಿಎಂಎಸ್, ವಿಎಸ್‌ಎಸ್‌ಎನ್ ಸೇರಿ ಹಲವು ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‌ಗಳ ಮುಂದೆ ಗೊಬ್ಬರಕ್ಕಾಗಿ ರೈತರು ಮುಗಿಬಿದ್ದಿದ್ದು ನೂಕುನುಗ್ಗಲು ಸಂಭವಿಸಿದೆ. 51,286 ಮೆಟ್ರಿಕ್ ಟನ್ ಬೇಡಿಕೆ ಪೈಕಿ 32,390 ಮೆಟ್ರಿಕ್ ಟನ್ ಮಾತ್ರ ಪೂರೈಕೆಯಾಗಿದ್ದರಿಂದ ಕೊರತೆಯಾಗಿದೆ.
ರಾಯಚೂರಿನಲ್ಲೂ 1.08 ಲಕ್ಷ ಮೆಟ್ರಿನ್ ಟನ್ ಬೇಡಿಕೆ ಪೈಕಿ 51,926.40 ಮೆಟ್ರಿಕ್ ಟನ್ ಸರಬರಾಜು ಮಾಡಿದ್ದರಿಂದ ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಯಾದಗಿರಿಯಲ್ಲಿ ಶೇ.20ರಷ್ಟು ಯೂರಿಯಾ ಗೊಬ್ಬರ ಕೊರತೆಯಾಗಿದೆ. ಜುಲೈವರೆಗೆ 19,311 ಮೆಟ್ರಿಕ್ ಟನ್ ಬೇಡಿಕೆ ಇದ್ದು, 21577 ಟನ್ ಪೂರೈಕೆಯಾಗಿದ್ದರಿಂದ ರೈತರ ಬೇಡಿಕೆಗೆ ತಕ್ಕಂತೆ ಪೂರೈಸಲು ಆಗದೆ ಅಧಿಕಾರಿಗಳು ಹೆಣಗಾಡುತ್ತಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಮೆಕ್ಕೆ ಜೋಳ ಸೇರಿ ವಿವಿಧ ಬೆಳೆಗಳಿಗೆ ಮೇಲು ಗೊಬ್ಬರವಾಗಿ ಯೂರಿಯಾ ಹಾಕುವ ಈ ಸಂದರ್ಭದಲ್ಲಿ ಯೂರಿಯಾ ರಸಗೊಬ್ಬರದ ಕೊರತೆಯಿಂದ ಜಿಲ್ಲೆಯ ರೈತರು ಪರದಾಡುತ್ತಿದ್ದಾರೆ.ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರದ ಕೊರತೆಯಿಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ ವಾಸ್ತವವಾಗಿ 2 ವಾರಗಳಿಂದಲೂ ರಸಗೊಬ್ಬರ ರೈತರಿಗೆ ಸಿಗುತ್ತಿಲ್ಲ.
ಅಭಾವ ಏಕೆ?
ಕೇಂದ್ರ ಸರಕಾರ ಮಣ್ಣಿನ ಫಲವತ್ತತೆ ಹೆಚ್ಚಿಸಲು ಹಾಗೂ ಯೂರಿಯಾ ಗೊಬ್ಬರದ ಮೇಲಿನ ಅವಲಂಬನೆ ತಪ್ಪಿಸಲು ನ್ಯಾನೋ ಯೂರಿಯಾ ಬಳಕೆಗೆ ಪ್ರೋತ್ಸಾಹಿಸುತ್ತಿದೆ. ಅದಕ್ಕಾಗಿ ಕೃಷಿ ಇಲಾಖೆಗೆ ಜಾಗೃತಿ ಮೂಡಿಸಲು ಸೂಚಿಸಿದೆ. ಅಧಿಕಾರಿಗಳು ನ್ಯಾನೋ ಯೂರಿಯಾ ಬಳಸುವಂತೆ ಹೇಳಿದರೂ ರೈತರು ಸಾಂಪ್ರದಾಯಿಕವಾಗಿ ಬಳಸುತ್ತಿದ್ದ ಯೂರಿಯಾ ಗೊಬ್ಬರವೇ ಬೇಕೆಂದು ಪ್ರತಿಭಟನೆ ನಡೆಸುತ್ತಿದ್ದಾರೆ.
ಇಡೀ ದೇಶದಲ್ಲೇ
ಗೊಬ್ಬರದ ಸಮಸ್ಯೆ
ಇಡೀ ದೇಶದಲ್ಲೇ ಗೊಬ್ಬರದ ಸಮಸ್ಯೆ ಇರುವುದು ಸತ್ಯ. ಇರಾನ್ ಯುದ್ಧದ ಕಾರಣಕ್ಕೆ ಗೊಬ್ಬರ ಆಮದು ಆಗುತ್ತಿಲ್ಲ. ಚೀನವು ಭಾರತಕ್ಕೆ ರಸಗೊಬ್ಬರ ರಫ್ತು ಸ್ಥಗಿತ ಮಾಡಿರುವುದರಿಂದ ಗೊಬ್ಬರ ಸಮಸ್ಯೆ ಇದೆ. ಕೇಂದ್ರದಿಂದ ಬರಬೇಕಿದ್ದ ಗೊಬ್ಬರ ಪೂರೈಕೆ ಸರಿಯಾಗಿ ನಡೆದಿಲ್ಲ ಎಂದು ಅವರು ಹೇಳಿದರು.
ರಾಜ್ಯಕ್ಕೆ 13 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಬೇಕು. ಆದರೆ ಕೇಂದ್ರ ಕೇವಲ 4 ಲಕ್ಷ ಮೆಟ್ರಿಕ್ ಟನ್ ಕೊಟ್ಟಿದೆ. ಹೀಗಾಗಿ ರಾಜ್ಯದ ರೈತರಿಗೆ ಅಗತ್ಯ ಗೊಬ್ಬರ ಪೂರೈಕೆ ಮಾಡಲು ಆಗುತ್ತಿಲ್ಲ. ಯೂರಿಯಾ ತಂದು ಕೊಡೋದು ಕೇಂದ್ರ ಸರಕಾರದ ಕೆಲಸ. ರೈತರು ಗೊಬ್ಬರ ಬೇಕಾದರೆ ಕೇಂದ್ರ ಸರಕಾರವನ್ನೇ ಕೇಳಬೇಕು. ರಾಜ್ಯ ಸರಕಾರವನ್ನಲ್ಲ.
– ಶಿವಾನಂದ ಪಾಟೀಲ, ಎಪಿಎಂಸಿ ಸಚಿವ
