ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಶ್ರೀಗಳ ಆರೋಗ್ಯದಲ್ಲಿ ಏರುಪೇರು: ಶುಗರ್ ಏರುಪೇರಾದ ಹಿನ್ನೆಲೆ ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ದಾಖಲು

ಚಿತ್ರದುರ್ಗ: ದಾವಣಗೆರೆ (Davanagere) ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ (Rajanahalli valmiki Mutt Prasannananda swamiji) ಅನಾರೋಗ್ಯಕ್ಕೀಡಾಗಿದ್ದು, ಚಿತ್ರದುರ್ಗದಲ್ಲಿ (Chitradruga) ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಗರ್ ಏರುಪೇರಾಗಿ ಅಸ್ವಸ್ಥರಾಗಿದ್ದ ವಾಲ್ಮೀಕಿ ಮಠದ ಪ್ರಸನ್ನಾನಂದಪುರಿಶ್ರೀ, ನಿನ್ನೆ(ಅಕ್ಟೋಬರ್ 08) ವಾಲ್ಮೀಕಿ ಜಯಂತ್ರಿ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಸದ್ಯ ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಆದ್ರೆ, ಶ್ರೀಗಳನ್ನ ನೋಡಲು ಭಕ್ತರ ದಂಡು ಆಸ್ಪತ್ರೆಗೆ ದೌಡಾಯಿಸುತ್ತಿದೆ. ಇದರಿಂದ ಶ್ರೀಗಳನ್ನು ಬೇರೆಡೆ ಶಿಫ್ಟ್ ಮಾಡುವ ಬಗ್ಗೆ ಚರ್ಚೆಗಳು ನಡೆದಿವೆ.

ಶ್ರೀಗಳ ಆರೋಗ್ಯದ ಬಗ್ಗೆ ಡಾಕ್ಟರ್ ಮಾಹಿತಿ
ಇನ್ನು ಪ್ರಸನ್ನಾನಂದಪುರಿಶ್ರೀ ಆರೋಗ್ಯದ ಬಗ್ಗೆ ಬಸವೇಶ್ವರ ಆಸ್ಪತ್ರೆಯ ವೈದ್ಯ ಡಾ.ವಿಶ್ವಾಸ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ವಾಲ್ಮೀಕಿಶ್ರೀಗಳಿಗೆ ಶುಗರ್ ಅನ್ ಕಂಟ್ರೋಲ್ಡ್ ಆಗಿತ್ತು. ಆಸ್ಪತ್ರೆಗೆ ಬಂದಾಗ ಶುಗರ್ ಲೆವಲ್ 440 ಆಗಿತ್ತು. ಜೊತೆಗೆ ಜ್ವರ ಬಂದಿದ್ದವು. ಸದ್ಯ ಚಿಕಿತ್ಸೆ ಬಳಿಕ ಈಗ ಶುಗರ್ ಲೆವಲ್ 160ಕ್ಕೆ ಬಂದಿದ್ದು, ಶ್ರೀಗಳಿಗೆ ಇನ್ನೂ ಕೆಲ ಪರೀಕ್ಷೆಗಳನ್ನು ಮಾಡಿಸಬೇಕಿದೆ. ಆದ್ರೆ, ಆಸ್ಪತ್ರೆಗೆ ಭಕ್ತರು ಬರುತ್ತಿದ್ದರಿಂದ ಶ್ರೀಗಳನ್ನು ಬೇರೆಡೆ ಸ್ಥಳಾಂತರಕ್ಕೆ ಯೋಚಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು
ಚೇತರಿಸಿಕೊಂಡ ಶ್ರೀಗಳು ಹೇಳಿದ್ದಿಷ್ಟು
ಚಿಕಿತ್ಸೆಯಿಂದ ಚೇತರಿಸಿಕೊಂಡ ಬಳಿಕ ಪ್ರಸನ್ನಾನಂದಪುರಿಶ್ರೀ ಪ್ರತಿಕ್ರಿಯಿಸಿದ್ದು, ಅಕ್ಟೋಬರ್ 6ಕ್ಕೆ ಕಾರ್ಯಕ್ರಮ ನಿಮಿತ್ಯ ಚಿತ್ರದುರ್ಗಕ್ಕೆ ಬಂದಿದ್ದು, ಮಾಚಿದೇವ ಮಠದ ಬಳಿ ವಾಕ್ ಮಾಡುವಾಗ ಸುಸ್ತು ಆಯಿತು. ಅಂದು ಮಾಚಿದೇವ ಮಠದಲ್ಲಿ ಉಳಿದು ವಿಶ್ರಾಂತಿ ಪಡೆದಿದ್ದೆ. ಬೆಳಗ್ಗೆ ಮತ್ತೆ ಸುಸ್ತಾದಾಗ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಂಡೆ. ಬಳಿಕ ವೈದ್ಯರ ಸೂಚನೆ ಮೇರೆಗೆ ಬಸವೇಶ್ವರ ಆಸ್ಪತ್ರೆಗೆ ದಾಖಲಾಗಿದ್ದೇನೆ. ನಿನ್ನೆ ನಡೆದ ವಾಲ್ಮೀಕಿ ಜಯಂತಿಯಲ್ಲೂ ಭಾಗಿಯಾಗಲು ಆಗಿಲ್ಲ. ಸಕ್ಕರೆ ಖಾಯಿಲೆಯಲ್ಲಿ ವ್ಯತ್ಯಾಸ ಹಿನ್ನೆಲೆ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಅನಾರೋಗ್ಯದಿಂದಾಗಿ ಪ್ರಸನ್ನಾನಂದಪುರಿಶ್ರೀ, ನಿನ್ನೆ ಅಂದರೆ ಮಂಗಳವಾರ (ಅ.07) ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಏರ್ಪಡಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಮತ್ತು ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಗೈರಾಗಿದ್ದರು.